'ಹಿಂದೂ ರಾಷ್ಟ್ರ ಸ್ಥಾಪನೆ'ಯ ಪೋಸ್ಟರ್ ಅಳವಡಿಕೆಗೆ ವ್ಯಾಪಕ ಆಕ್ರೋಶ: ತೆರವುಗೊಳಿಸಲು ಪ್ರಗತಿಪರರ ಆಗ್ರಹ

ಶಿವಮೊಗ್ಗ, ಜ. 24: ಹಿಂದೂ ಜನಜಾಗೃತಿ ಸಮಿತಿಯು ಜ. 27 ರಂದು ನಗರದ ಎನ್‍ಡಿವಿ ಹಾಸ್ಟೆಲ್ ಮೈದಾನದಲ್ಲಿ ಆಯೋಜಿಸಿರುವ 'ಹಿಂದೂ ರಾಷ್ಟ್ರ ಜಾಗೃತಿ ಸಭೆಯ' ಅಂಗವಾಗಿ, ನಗರದ ವಿವಿಧೆಡೆ ಹಾಕಿರುವ 'ಹಿಂದೂ ರಾಷ್ಟ್ರ ಸ್ಥಾಪನೆ ಮಾಡೋಣ' ಎಂಬ ಸಂದೇಶವಿರುವ ಪೋಸ್ಟರ್ ಗೆ ಪ್ರಗತಿಪರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತತ್‍ಕ್ಷಣವೇ ಈ ಪೋಸ್ಟರ್ ಗಳ ತೆರವಿಗೆ ಆಗ್ರಹಿಸಿದ್ದಾರೆ.
'ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗದ ಹಾಗೆ, ನೀತಿ-ನಿಯಮಗಳಿಗೆ ಅನುಗುಣವಾಗಿ ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್, ಪೋಸ್ಟರ್ ಹಾಕುವುದಕ್ಕೆ ಪ್ರತಿಯೋರ್ವರಿಗೂ ಅವಕಾಶವಿದೆ. ಆದರೆ ಹಿಂದೂ ಜನಜಾಗೃತಿ ಸಮಿತಿ ಹಾಕಿರುವ ಭಿತ್ತಿಪತ್ರದ ಸಂದೇಶವು ಪ್ರಚೋಧನಕಾರಿಯಾಗಿದೆ. ಒಂದು ಧರ್ಮದ ರಾಷ್ಟ್ರ ನಿರ್ಮಿಸೋಣ ಎಂದು ಹೇಳುವ ಮೂಲಕ, ಸಂವಿಧಾನದ ಜಾತ್ಯತೀತ ತತ್ವಗಳಿಗೆ ಅಪಚಾರ ಎಸಗುವಂತಿದೆ' ಎಂದು ಪ್ರಗತಿಪರರು ದೂರಿದ್ದಾರೆ.
ಈ ರೀತಿಯ ಪೋಸ್ಟರ್ ಗಳ ಅಳವಡಿಕೆಗೆ ಒಂದು ವೇಳೆ ಅನುಮತಿ ನೀಡಿದ್ದೇ ಆದರೆ, ಅದು ಅಕ್ಷಮ್ಯ ಅಪರಾಧವಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಡಳಿತ ಗಂಭೀರ ಗಮನಹರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹಾಕಿರುವ ಪೋಸ್ಟರ್ ಗಳನ್ನು ಕಾಲಮಿತಿಯಲ್ಲಿ ತೆರವುಗೊಳಿಸಬೇಕು ಎಂದು ಪ್ರಗತಿಪರರು ಆಗ್ರಹಿಸಿದ್ದಾರೆ.
ಕಾರ್ಯಕ್ರಮ ಆಯೋಜನೆ: ನಗರದ ವಿವಿಧೆಡೆ ಅಳವಡಿಸಿರುವ ಹಿಂದೂ ಜನಜಾಗೃತಿ ಸಮಿತಿಯ ಪೋಸ್ಟರ್ ನಲ್ಲಿರುವ ಮಾಹಿತಿಯಂತೆ, ಜ. 27 ರಂದು ಶಿವಮೊಗ್ಗದ ಹಳೇ ತಾಲೂಕು ಕಚೇರಿ ರಸ್ತೆಯ ಎನ್.ಡಿ.ವಿ. ಹಾಸ್ಟೆಲ್ ಮೈದಾನದಲ್ಲಿ ಸಂಜೆ 5.30 ಕ್ಕೆ ಹಿಂದೂ ರಾಷ್ಟ್ರ ಜಾಗೃತಿ ಸಭೆ ಆಯೋಜಿಸಿರುವುದಾಗಿ ಹಾಗೂ 'ಹಿಂದೂಗಳೇ ಎಲ್ಲರೂ ಒಟ್ಟಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡೋಣ' ಎಂಬ ಘೋಷ ವಾಕ್ಯವಿದೆ. ಪೋಸ್ಟರ್ ಕೆಳಭಾಗದಲ್ಲಿ 'ಹಿಂದೂಗಳೇ, ಸಭೆಗೆ ಉಪಸ್ಥಿತರಿದ್ದು ಹಿಂದೂ ಐಕ್ಯತೆ ಪ್ರದರ್ಶಿಸಿ' ಎಂಬ ಸಂದೇಶವಿದೆ.
ಎಷ್ಟು ಸರಿ?: ಭಾರತವು ಸರ್ವಸ್ವತಂತ್ರ, ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ವಿವಿಧತೆಯಲ್ಲಿ ಏಕತೆಯಿರುವ ದೇಶವಾಗಿದೆ. ಹಲವು ಜಾತಿ, ಧರ್ಮೀಯರು ನೆಲೆಸಿದ್ದಾರೆ. ಆದರೆ ಒಂದು ಧರ್ಮದ ರಾಷ್ಟ್ರ ನಿರ್ಮಾಣ ಮಾಡೋಣ ಎಂದು ಕರೆ ಕೊಡುವುದು ಸಂವಿಧಾನಕ್ಕೆ ಎಸಗಿದ ಅಪಚಾರವಾಗಿದೆ. ಇದು ದೇಶದ ಸೌಹಾರ್ದತೆ, ಭ್ರಾತೃತ್ವಕ್ಕೆ ಧಕ್ಕೆ ತರುವಂತದ್ದಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ.
ಅನುಮತಿ ಕೊಟ್ಟಿಲ್ಲ: ಎಸ್.ಪಿ. ಅಭಿನವ್ ಖರೆ
ಜ. 27 ರಂದು ಹಿಂದೂ ಜನಜಾಗೃತಿ ಸಮಿತಿಯು ನಗರದ ಎನ್‍ಡಿವಿ ಹಾಸ್ಟೆಲ್ ಆವರಣದಲ್ಲಿ ಆಯೋಜಿಸಿರುವ ಹಿಂದೂ ರಾಷ್ಟ್ರ ಜಾಗೃತಿ ಸಭೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಗುರುವಾರ 'ವಾರ್ತಾ ಭಾರತಿ'ಯು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆಯವರನ್ನು ಸಂಪರ್ಕಿಸಿದಾಗ, 'ಈ ಕಾರ್ಯಕ್ರಮಕ್ಕೆ ಇಲ್ಲಿಯವರೆಗೂ ಯಾವುದೇ ರೀತಿಯ ಅನುಮತಿ ನೀಡಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ದುರುದ್ದೇಶಪೂರಿತ, ಮತೋನ್ಮಾದದ ಕಾರ್ಯಕ್ರಮ : ಕೋಸೌವೇ ಮುಖಂಡ ಕೆ.ಎಲ್.ಅಶೋಕ್
ಗಣರಾಜೋತ್ಸವ ಸಂದರ್ಭದಲ್ಲಿ ಈ ರೀತಿಯ ದುರುದ್ದೇಶ, ಮತೋನ್ಮಾದದ ಕಾರ್ಯಕ್ರಮಗಳು ಆಯೋಜನೆಯಾಗುತ್ತಿರುವುದನ್ನು ಗಮನಿಸಿದರೆ ದೊಡ್ಡ ಕೋಮುಗಲಭೆ ಹುಟ್ಟುಹಾಕುವ ಪಿತೂರಿಯ ಅನುಮಾನ ಮೂಡುತ್ತಿದೆ. ಗಣರಾಜೋತ್ಸದ ದಿನ ಸಂವಿಧಾನ, ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಇತ್ಯಾದಿ ಸಮಾಜಮುಖಿ ವಿಷಯಗಳು ಚರ್ಚೆಯಾಗದಿರಲಿ ಎಂಬ ಷಡ್ಯಂತ್ರ ಅಡಗಿದೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಧರ್ಮದ ಹೆಸರಿನಲ್ಲಿ ಜನರನ್ನು ಉದ್ರೇಕಗೊಳಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಕೋಮು ಸೌಹಾರ್ದ ವೇದಿಕೆ ರಾಜ್ಯ ಮುಖಂಡ ಕೆ.ಎಲ್.ಅಶೋಕ್ ಆರೋಪಿಸಿದ್ದಾರೆ.
ಧರ್ಮದ ನೆಪದಲ್ಲಿ ಜನರನ್ನು ಉದ್ರೇಕಗೊಳಿಸುವ ಕಾರ್ಯವನ್ನು ಮೊದಲಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಮಧ್ಯಪ್ರದೇಶ ಹಾಗೂ ಇತರೆ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಧರ್ಮದ ವಿಷಯ ಮುಂದಿಟ್ಟುಕೊಂಡು ಹೋಗಿದ್ದ ಇವರಿಗೆ ಹೀನಾಯ ಸೋಲಾಗಿದೆ. ಇದೀಗ ಲೋಕಸಭೆ ಚುನಾವಣೆ ವೇಳೆ ಮತ್ತೆ ಮಂದಿರ ಮತ್ತಿತರ ವಿಷಯ ಮುಂದಿಟ್ಟುಕೊಂಡು ಚುನಾವಣೆಗೆ ಅಣಿಯಾಗುತ್ತಿದ್ದಾರೆ. ಈ ಮೂಲಕ ನಿಜವಾದ ವಿಷಯಗಳ ಚರ್ಚೆ ಮರೆಮಾಚಲು ಯತ್ನಿಸಲಾಗುತ್ತಿದೆ ಎಂದ ಅವರು, ಪೊಲೀಸ್ ಇಲಾಖೆಯು ನಿರ್ಲಕ್ಷ್ಯ ವಹಿಸಬಾರದು. ಇಂತಹ ಯಾವುದೇ ಪುಂಡಾಟಿಕೆಗಳಿಗೆ ಅವಕಾಶ ನೀಡಬಾರದು. ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಂವಿಧಾನ ಬದಲಿಸುವ ಷಡ್ಯಂತ್ರದ ಭಾಗ: ಡಿಎಸ್ಎಸ್ ರಾಜ್ಯ ಸಂಚಾಲಕ ಎನ್.ಗುರುಮೂರ್ತಿ
ಒಂದು ಧರ್ಮದ ಹೆಸರಿನಲ್ಲಿ ದೇಶ ನಿರ್ಮಾಣ ಮಾಡುತ್ತೇವೆ ಎಂದು ಹೇಳುವ ಮೂಲಕ ದಾದಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ರವರ ಸಂವಿಧಾನದ ಆಶಯಗಳಿಗೆ ಕೊಡಲಿಯೇಟು ಹಾಕುವ ಷಡ್ಯಂತ್ರ ನಡೆಸಲಾಗುತ್ತಿದೆ. ಕೋಮುವಾದದ ಮೂಲಕ ದೇಶ ವಿಭಜನೆಗೆ ಮತಾಂಧ ಶಕ್ತಿಗಳು ನಡೆಸುತ್ತಿರುವ ಹುನ್ನಾರವಾಗಿದೆ. ಸಂವಿಧಾನ ಬದಲಿಸಿ, ಮನು ಶಾಸ್ತ್ರ ಹೇರಲು ಯತ್ನಿಸುತ್ತಿವೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎನ್.ಗುರುಮೂರ್ತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶ ಜಾತ್ಯತೀತವಾಗಿದೆ. ಇಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು, ಬೌದ್ದರು, ಜೈನ ಸೇರಿದಂತೆ ಹಲವು ಧರ್ಮದವರಿದ್ದಾರೆ. ಆದರೆ ಏಕದೇಶ, ಏಕಭಾಷೆ, ಏಕ ಧರ್ಮದ ಪರಿಕಲ್ಪನೆಯ ಮೂಲಕ ದೇಶದ ಬಹುತ್ವ ನಾಶಗೊಳಿಸಲು ಹಾಗೂ ಕೋಮುವಾದ ಬಿತ್ತಲು ಮತಾಂಧ ಶಕ್ತಿಗಳು ಯತ್ನಿಸುತ್ತಿವೆ ಎಂದು ದೂರಿದ್ದಾರೆ. ಒಂದು ಧರ್ಮದ ರಾಷ್ಟ್ರ ನಿರ್ಮಾಣ ಮಾಡೋಣ ಎಂದು ಕರೆ ಕೊಡುವುದು ಅಸಂಬದ್ದವಾಗಿದೆ. ಯಾವುದೇ ಕಾರಣಕ್ಕೂ ಜಾತ್ಯತೀತ ತತ್ವ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಆಯೋಜನೆಯಾಗುವ ಕಾರ್ಯಕ್ರಮಗಳಿಗೆ ಆಡಳಿತವು ಅವಕಾಶ ನೀಡಬಾರದು ಎಂದು ಎನ್.ಗುರುಮೂರ್ತಿಯವರು ಒತ್ತಾಯಿಸಿದ್ದಾರೆ.







