ಸುಳಿಗೆ ಪ್ರಕರಣ: ಇಬ್ಬರು ಆರೋಪಿಗಳು ಸೆರೆ

ಬಂಟ್ವಾಳ, ಜ. 24: ಕಳೆದ ಅ. 7ರಂದು ಬಂಟ್ವಾಳದಲ್ಲಿ ನಡೆದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಹತ್ತನೇ ಮೈಲುಗಲ್ಲು ನಿವಾಸಿಗಳಾದ ಸಿರಾಜ್ ಯಾನೆ ಮಹಮ್ಮದ್ ಇಸ್ಮಾಯಿಲ್ (19), ಶಾಕೀರ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ ಸುಲಿಗೆ ಗೈದ 25 ಸಾವಿರ ರೂ. ಮೌಲ್ಯದ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿ ಕೊಳ್ಳಲಾಗಿದೆ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಹಿನ್ನೆಲೆ:
2018ರ ಅ. 7ರಂದು ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಂಟ್ವಾಳ ನೆರೆ ಪರಿಹಾರ ರಸ್ತೆಯಲ್ಲಿ ನಿಂತಿದ್ದ ಪ್ರವೀಣ್ ಎಂಬುವವರಿಗೆ ಕಾರಿನಲ್ಲಿ ಬಂದ ಆರೋಪಿಗಳು, ಹಲ್ಲೆ ನಡೆಸಿ, ಮೊಬೈಲ್ ಸುಲಿಗೆ ಮಾಡಿದ್ದರು. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ದ.ಕ. ಜಿಲ್ಲಾ ಎಸ್ಪಿ ಲಕ್ಷ್ಮಿ ಪ್ರಸಾದ್ ಅವರ ಮಾರ್ಗದರ್ಶನದಂತೆ ಬಂಟ್ವಾಳ ಎಎಸ್ಪಿ ಸೈದುಲ್ ಅಡಾವತ್ ಅವರ ನಿರ್ದೇಶನದಂತೆ ಬಂಟ್ವಾಳ ವೃತ್ತ ಪೊಲೀಸ್ ನಿರೀಕ್ಷಕ ಟಿ.ಡಿ. ನಾಗರಾಜ್ ರವರ ನೇತೃತ್ವದಲ್ಲಿ ಹಾಗೂ ಬಂಟ್ವಾಳ ನಗರ ಪೊಲೀಸ್ ಉಪ ನಿರೀಕ್ಷಕರಾದ ಚಂದ್ರಶೇಖರ್ , ಹರೀಶ್ ಎಂ.ಆರ್ ಮತ್ತು ಸಿಬ್ಬಂದಿ ಎಎಸ್ಸೈ ಸಂಜೀವ್, ಗಿರೀಶ್, ವಿವೇಕ, ಕುಮಾರ್, ನಝೀರ್, ಮಲ್ಲಿಕ್ , ರಾಘವೇಂದ್ರ ಹಾಗೂ ಕಂಪ್ಯೂಟರ್ ವಿಭಾಗದ ಸಂಪತ್ ಹಾಗೂ ದಿವಾಕರ್ ರವರು ಈ ಪ್ರಕರಣವನ್ನು ಭೇದಿಸಲು ಯಶಸ್ವಿಯಾಗಿದ್ದಾರೆ.







