ಶಾಲೆಗಳಲ್ಲಿ ಕ್ರೀಡೆಗೆ ಪ್ರೋತ್ಸಾಹ ಸಿಗಬೇಕು-ಅನಿತಾ ಹೇಮನಾಥ ಶೆಟ್ಟಿ
ನೇತಾಜಿ ಸುಭಾಸ್‍ಚಂದ್ರ ಬೋಸರ ಜನ್ಮದಿನ ಪ್ರಯುಕ್ತ ಶಿಕ್ಷಕರ ಕ್ರೀಡಾಕೂಟ

ಪುತ್ತೂರು, ಜ. 24: ನೇತಾಜಿಯವರ ಶಿಸ್ತು, ಬಡವರ ಪಾಲಿನ ದೇವರಾದ ಹಸ್ತಂಗತ ಸಿದ್ಧಗಂಗಾ ಸ್ವಾಮೀಜಿಯವರ ಮಹತ್ವ ದೈಹಿಕ ಶಿಕ್ಷಣ ಶಿಕ್ಷಕರ ಚಟುವಟಿಕೆಯಲ್ಲೂ ಕಾಣುತ್ತಿದೆಯಾದೆ. ಪ್ರಸ್ತುತ ದೈಹಿಕ ಶಿಕ್ಷಣ ಶಿಕ್ಷಕರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರ ಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗಬೇಕೆಂದರೆ ಎಲ್ಲಾ ಶಾಲೆಗಳಲ್ಲೂ ಕ್ರೀಡೆಗೆ ಪ್ರೋತ್ಸಾಹ ದೊರೆಯಬೇಕು. ಇದಕ್ಕಾಗಿ ಶಾಲಾ ಆಡಳಿತ ಮಂಡಳಿ, ಮೇಲುಸ್ತುವಾರಿ ಸಮಿತಿ ಶ್ರಮ ವಹಿಸಬೇಕು ಎಂದು ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು.
ಅವರು ಗುರುವಾರ ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನೇತಾಜಿ ಸುಭಾಸ್‍ಚಂದ್ರ ಬೋಸರ ಜನ್ಮದಿನ ಪ್ರಯುಕ್ತ ನಡೆದ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡಾ ಧ್ವಜರೋಹಣಗೈದು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಕ್ರಾಂತಿಯ ಮೂಲಕ ಹೋರಾಟದ ಕಿಚ್ಚನ್ನು ಹಚ್ಚಿದ ನೇತಾಜಿ ಸುಭಾಸ್‍ಚಂದ್ರ ಬೋಸ್ ಅವರ ಜನ್ಮ ದಿನದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಮಹತ್ವ ಇದೆ. ನಮ್ಮ ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರಿಂದ ತರಬೇತಿ ಪಡೆದು ಅದೆಷ್ಟೋ ಮಂದಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿ ಕೊನೆಗೆ ಬ್ಯಾಂಕ್, ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ಅದೇ ರೀತಿ ಒಂದಷ್ಟು ಕ್ರೀಡಾಪಟುಗಳನ್ನು ಸೈನ್ಯದಲ್ಲೂ ಸೇರಿಸುವ ಮೂಲಕ ನೇತಾಜಿಯವರ ಕ್ರಾಂತಿಗೆ ಪ್ರಚೋದನೆ ನೀಡುವ ಕೆಲಸ ಆಗಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕ ವೈ ಶಿವರಾಮಯ್ಯ ಅವರು ಮಾತನಾಡಿ ಚಿಕ್ಕ ವಯಸ್ಸಿನಲ್ಲಿ ದೇಶ ಪ್ರೇಮದ ಪಾಠ ಹೇಳಿ ಹೋದ ಸುಭಾಶ್ಚಂದ್ರ ಬೋಸ್ ಅವರು ವೈಚಾರಿಕ ಭಿನ್ನತೆ ಸಂದರ್ಭದಲ್ಲೂ ದೇಶಕ್ಕಾಗಿ ಹೋರಾಡಿದರು. ಅದೇ ರೀತಿ ನಮ್ಮ ಮಕ್ಕಳಲ್ಲಿ ದೇಶ ಪ್ರೇಮ ಹುಟ್ಟಿಸುವ ಕೆಲಸ ದೈಹಿಕ ಶಿಕ್ಷಣ ಶಿಕ್ಷಕರಿಂದ ಆಗಬೇಕು. ಜೊತೆಗೆ ಗುರಿ ಸಾಧಿಸಲು ಒಳ ಗುಂಪು ಮಾಡಿ ಬಲ ಕುಂದುತ್ತಾ ಹೋಗುವ ಬದಲು ಒಂದೇ ಮನಸ್ಸಿನಲ್ಲಿ ಮುಂದೆ ಹೋಗಬೇಕು ಎಂದರು.
ನಗರಸಭಾ ಸದಸ್ಯ ಎನ್.ಕೆ.ಜಗ್ಗನಿವಾಸ್ ರಾವ್ ಅವರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎನ್. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ,ತಾಲೂಕು ಒಕ್ಕಲಿಗ ಗೌಡ ಸೇವ ಸಂಘದ ಅಧ್ಯಕ್ಷ ಹೆಚ್.ಡಿ.ಶಿವರಾಮ ಗೌಡ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ್ ಭಟ್, ಜಿಲ್ಲಾ ಯುವಸಬಲೀಕರಣ ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್, ಪುತ್ತೂರು ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಚಂದ್ರಹಾಸ ರೈ, ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುರೇಶ್ ಎನ್.ಕೆ, ನೆಲ್ಯಾಡಿ ಸಂತ ಜೋರ್ಜ್ ಪದವಿಪೂರ್ವ ಕಾಲೇಜಿನ ಸಂಚಾಲಕ ಅಬ್ರಹಾಂ ವರ್ಗೀಸ್, ವಲಿಬಾಲ್ ಅಸೋಶಿಯೇಶನ್‍ನ ಅಧ್ಯಕ್ಷ ಸತೀಶ್ ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ಪ್ರೌಢಶಾಲಾ ಮುಖ್ಯಗುರುಗಳ ಸಂಘದ ಅಧ್ಯಕ್ಷ ದಿವಾಕರ ಅಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತರನ್ನು ಮತ್ತು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ಜಿಲ್ಲೆಯ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮೂಡಬಿದಿರೆ ತಾಲೂಕಿನ ಸುಮಾರು 700 ಮಂದಿ ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಿದ್ದರು.
ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಹೆಚ್.ನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾ ಮೇಲ್ವಿಚಾರಕ ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ್ ಗೌಡ ಏನೆಕಲ್ಲು ಸ್ವಾಗತಿಸಿದರು. ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಐವಿ ಗ್ರೇಟ್ಟಾ ಪಾಯಸ್ ವಂದಿಸಿದರು.
ಕ್ರೀಡಾ ಮೇಲ್ವಿಚಾರಕ ಕುಂಬ್ರ ಸ.ಪ.ಪೂ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ ಗೌಡ ಮತ್ತು ನವೀನ್ ಸರ್ವೆ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮತ್ತು ತಾಲೂಕು ಯುವ ಸಬಲೀಕರಣ ಕ್ರೀಡಾಧಿಕಾರಿ ಮಾಮಚ್ಚನ್ ಎಂ. ವಿವಿಧ ಕಾರ್ಯಕ್ರಮ ನಿರ್ವಹಿಸಿದರು.







