ಮಹಿಳೆಯರ ಸಿಂಗಲ್ಸ್: ಒಸಾಕಾ-ಕ್ವಿಟೋವಾ ಫೈನಲ್ ಹಣಾಹಣಿ
ಆಸ್ಟ್ರೇಲಿಯನ್ ಓಪನ್

ಕ್ವಿಟೋವಾ ಫೈನಲ್‌ಗೆ
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಮೊದಲ ಸೆಮಿ ಫೈನಲ್‌ನಲ್ಲಿ ಶ್ರೇಯಾಂಕರಹಿತ ಅಮೆರಿಕ ಆಟಗಾರ್ತಿ ಡ್ಯಾನಿಲ್ಲೆ ಕಾಲಿನ್ಸ್‌ರನ್ನು 7-6(2), 6-0 ಅಂತರದಿಂದ ಮಣಿಸಿರುವ ಕ್ವಿಟೋವಾ ಐದು ವರ್ಷಗಳ ಬಳಿಕ ಗ್ರಾನ್‌ಸ್ಲಾಮ್ ಟೂರ್ನಿಯೊಂದರಲ್ಲಿ ಫೈನಲ್‌ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ.
ಕ್ವಿಟೋವಾ 28 ವರ್ಷಗಳ ಬಳಿಕ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ ಝೆಕ್‌ನ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾದರು. 1991ರಲ್ಲಿ ಜಾನಾ ನೊವೊಟ್ನಾ ಈ ಸಾಧನೆ ಮಾಡಿದ್ದರು. ನೊವೊಟ್ನಾ ಫೈನಲ್‌ನಲ್ಲಿ ಮೊನಿಕಾ ಸೆಲೆಸ್‌ಗೆ ಸೋತಿದ್ದರು. ‘‘ನಾನು ಕಠಿಣ ಶ್ರಮಪಟ್ಟ ಕಾರಣ ಟೂರ್ನಿಯಲ್ಲಿ ಫೈನಲ್ ತಲುಪಿದ್ದೇನೆ. ಫೈನಲ್‌ನಲ್ಲಿ ಏನೇ ಆದರೂ ಆ ಪಂದ್ಯವನ್ನು ಆನಂದಿಸುತ್ತೇನೆ. ಫೈನಲ್‌ಗೆ ತಲುಪಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಮೊದಲ ಸೆಟ್ ಬಹಳ ಪೈಪೋಟಿಯಿಂದ ಕೂಡಿತ್ತು. ಆಗ ನಾನು ಭಯಪಟ್ಟಿದ್ದೆ. ಟೈ-ಬ್ರೇಕ್ ಮೂಲಕ ಮೊದಲ ಸೆಟ್ ಜಯಿಸಲು ಯಶಸ್ವಿಯಾಗಿದ್ದಕ್ಕೆ ಖುಷಿಯಾಗುತ್ತಿದೆ’’ ಎಂದು ಸಂದರ್ಶನದಲ್ಲಿ ಕ್ವಿಟೋವಾ ಹೇಳಿದ್ದಾರೆ.
ಮೆಲ್ಬೋರ್ನ್, ಜ.24: ಅಮೆರಿಕ ಓಪನ್ ಚಾಂಪಿಯನ್ ನವೊಮಿ ಒಸಾಕಾ ಹಾಗೂ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದು, ಶನಿವಾರ ಪ್ರತಿಷ್ಠಿತ ಪ್ರಶಸ್ತಿಗಾಗಿ ಈ ಇಬ್ಬರು ಆಟಗಾರ್ತಿಯರು ಹೋರಾಟ ನಡೆಸಲಿದ್ದಾರೆ.
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ನ 2ನೇ ಸೆಮಿ ಫೈನಲ್ ಫೈಟ್‌ನಲ್ಲಿ ಜಪಾನ್‌ನ ಒಸಾಕಾ ಝೆಕ್ ಆಟಗಾರ್ತಿ ಕರೊಲಿನಾ ಪ್ಲಿಸ್ಕೋವಾರನ್ನು 6-2, 4-6, 6-4 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಇದೇ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೆ ತೇರ್ಗಡೆಯಾಗಿದ್ದಾರೆ.
ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ರನ್ನು ಸೋಲಿಸಿ ಶಾಕ್ ನೀಡಿದ್ದ ಕ್ವಿಟೋವಾ ಸೆಮಿ ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.
ಒಂದು ಗಂಟೆ, 53 ನಿಮಿಷಗಳ ಕಾಲ ನಡೆದ ಪೈಪೋಟಿಯಲ್ಲಿ 21ರ ಹರೆಯದ ಒಸಾಕಾ ಸತತ ಎರಡನೇ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದಾರೆ.
ಒಸಾಕಾ ಪ್ರಶಸ್ತಿ ಸುತ್ತಿನಲ್ಲಿ ಝೆಕ್‌ನ ಇನ್ನೋರ್ವ ಆಟಗಾರ್ತಿ ಕ್ವಿಟೋವಾರ ಸವಾಲು ಎದುರಿಸಲಿದ್ದಾರೆ.








