ರಫೆಲ್ ನಡಾಲ್ ಫೈನಲ್‌ಗೆ ತೇರ್ಗಡೆ
ಆಸ್ಟ್ರೇಲಿಯನ್ ಓಪನ್

ಮೆಲ್ಬೋರ್ನ್, ಜ.24: ಉದಯೋನ್ಮುಖ ತಾರೆ ಸ್ಟಿಫನೊಸ್ ಸಿಟ್‌ಸಿಪಾಸ್‌ಗೆ ಟೆನಿಸ್ ಪಾಠ ಕಲಿಸಿದ ಸ್ಪೇನ್ ಸೂಪರ್‌ಸ್ಟಾರ್ ರಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್‌ಗೆ ತೇರ್ಗಡೆಯಾಗಿದ್ದಾರೆ.
ಗುರುವಾರ ಒಂದು ಗಂಟೆ, 46 ನಿಮಿಷಗಳ ಕಾಲ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ನಡಾಲ್ ಅವರು ಗ್ರೀಕ್‌ನ ಸ್ಟಿಫನೊಸ್‌ರನ್ನು 6-2, 6-4, 6-0 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.
ಹಾಲಿ ಚಾಂಪಿಯನ್ ರೋಜರ್ ಫೆಡರರ್ ಸಹಿತ ಹಲವು ಶ್ರೇಷ್ಠ ಆಟಗಾರರನ್ನು ಮಣಿಸಿ ಮೊದಲ ಬಾರಿ ಅಂತಿಮ-4ರ ಘಟ್ಟ ಪ್ರವೇಶಿಸಿದ್ದ 20ರ ಹರೆಯದ ಸ್ಟಿಫನೊಸ್‌ಗೆ ನಡಾಲ್ ಕಠಿಣ ಸವಾಲಾಗಿ ಪರಿಣಮಿಸಿದರು.
ಸತತ 63 ಪಂದ್ಯಗಳಲ್ಲಿ ಒಂದೂ ಸರ್ವ್‌ನ್ನು ಕೈಚೆಲ್ಲದ ನಡಾಲ್ ಫೈನಲ್ ಹಾದಿಯಲ್ಲಿ ಒಂದೂ ಸೆಟ್‌ನ್ನು ಸೋತಿಲ್ಲ. ಫೈನಲ್‌ನಲ್ಲಿ ಸರ್ಬಿಯದ ನೊವಾಕ್ ಜೊಕೊವಿಕ್ ಅಥವಾ ಲುಕಾಸ್ ಪೌಲ್ಲಿ ಅವರನ್ನು ಎದುರಿಸಲಿದ್ದಾರೆ. ಈ ಇಬ್ಬರು ಆಟಗಾರರು ಶುಕ್ರವಾರ 2ನೇ ಸೆಮಿ ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ.
‘‘ನನ್ನ ಪ್ರಕಾರ ನಾನು ಪ್ರತಿದಿನ ಚೆನ್ನಾಗಿ ಆಡಿದ್ದೇನೆ. ಟೆನಿಸ್ ಆಡದೇ ಕೆಲವು ತಿಂಗಳು ಉರುಳಿತ್ತು. ಈ ಟೆನಿಸ್ ಅಂಗಣ ಹಾಗೂ ಇಲ್ಲಿನ ಪ್ರೇಕ್ಷಕರು ನನಗೆ ನಂಬಲಸಾಧ್ಯ ಶಕ್ತಿ ನೀಡಿದ್ದಾರೆ’’ಎಂದು
ನಡಾಲ್ ಹೇಳಿದ್ದಾರೆ.
ನಡಾಲ್ ಈ ಗೆಲುವಿನ ಮೂಲಕ ಐದನೇ ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಟೆನಿಸ್ ಓಪನ್ ಯುಗದಲ್ಲಿ ಎಲ್ಲ ನಾಲ್ಕು ಗ್ರಾನ್‌ಸ್ಲಾಮ್ ಟೂರ್ನಿಗಳನ್ನು ಎರಡು ಬಾರಿ ಜಯಿಸಿದ ಪ್ರಥಮ ಆಟಗಾರ ಎನಿಸಿಕೊಳ್ಳುವತ್ತ ನಡಾಲ್ ಹೆಜ್ಜೆ ಇಟ್ಟಿದ್ದಾರೆ. ನಡಾಲ್ 2009ರಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದರು.
ಸ್ಟಿಫನೊಸ್ ಇದೀಗ ಎರಡನೇ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸಿದ್ದು ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಏಳನೇ ಬಾರಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ ಮೊದಲ ಗ್ರೀಕ್ ಆಟಗಾರ(ಪುರುಷ/ಮಹಿಳಾ ವಿಭಾಗ)ಎನಿಸಿಕೊಳ್ಳುವ ಕನಸು ಕಂಡಿದ್ದರು. ಆದರೆ, ಅವರ ಕನಸು ಭಗ್ನಗೊಂಡಿದೆ.
‘‘ಹಲವು ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಎನಿಸಿಕೊಳ್ಳುವ ಎಲ್ಲ ಅರ್ಹತೆ ಸ್ಟಿಫನೊಸ್‌ಗಿದೆ. 20ನೇ ವಯಸ್ಸಿನಲ್ಲಿ ಸೆಮಿ ಫೈನಲ್‌ಗೆ ತಲುಪಿರುವ ಅವರು ಇನ್ನಷ್ಟು ಸಾಧನೆ ಮಾಡುವ ಅವಕಾಶವಿದೆ. ಮುಂದಿನ ವರ್ಷಗಳಲ್ಲಿ ಅವರನ್ನು ಪ್ರಮುಖ ಸುತ್ತಿನಲ್ಲಿ ಎದುರಿಸುವ ವಿಶ್ವಾಸ ನನಗಿದೆ’’ಎಂದು ನಡಾಲ್ ಅಭಿಪ್ರಾಯಪಟ್ಟಿದ್ದಾರೆ.
ನಡಾಲ್ ಫೈನಲ್ ಹಾದಿಯಲ್ಲಿ ಇನ್ನಿಬ್ಬರು ಯುವ ಪೀಳಿಗೆಯ ಟೆನಿಸ್ ತಾರೆಯರಾದ 19ರ ಹರೆಯದ ಅಲೆಕ್ಸ್ ಡಿ ಮಿನೌರ್ ಹಾಗೂ 21ರ ಹರೆಯದ ಫ್ರಾನ್ಸಿಸ್ ಟಿಫಾಯ್ ಅವರನ್ನು ಸೋಲಿಸಿ ಅವರ ಕನಸನ್ನು ನುಚ್ಚು ಮಾಡಿದ್ದರು.







