ರಣಜಿ: ಜೈದೇವ್ ವೇಗಕ್ಕೆ ಶರತ್, ಗೋಪಾಲ್ ತಡೆ
ಸೌರಾಷ್ಟ್ರ ವಿರುದ್ಧ ರಣಜಿ ಸೆಮಿಫೈನಲ್

► ಕರ್ನಾಟಕ ಮೊದಲ ಇನಿಂಗ್ಸ್ 264/9 ►ಪಾಂಡೆ ಅರ್ಧಶತಕ, ಉನಾದ್ಕತ್‌ಗೆ 4 ವಿಕೆಟ್
ಬೆಂಗಳೂರು, ಜ.24: ಸೌರಾಷ್ಟ್ರ ತಂಡದ ನಾಯಕ ಜೈದೇವ್ ಉನಾದ್ಕತ್‌ರ ಬೆಂಕಿಯುಗುಳುವ ಎಸೆತಗಳಿಗೆ ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ, ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಹಾಗೂ ಯುವ ವಿಕೆಟ್ ಕೀಪರ್ ಶ್ರೀನಿವಾಸ್ ಶರತ್ ತಣ್ಣೀರೆರೆದರು. ಒಂದು ಹಂತದಲ್ಲಿ 100ರೊಳಗೆ ಆಲೌಟಾಗುವ ಭೀತಿ ಎದುರಿಸಿದ್ದ ಕರ್ನಾಟಕ ತಂಡ ಈ ಮೂವರ ಅತ್ಯುತ್ತಮ ಪ್ರದರ್ಶನದಿಂದ ರಣಜಿ ಕ್ರಿಕೆಟ್‌ನ 2ನೇ ಸೆಮಿಫೈನಲ್ ಮೊದಲ ದಿನದಾಟದಲ್ಲಿ ಪ್ರಥಮ ಇನಿಂಗ್ಸ್‌ನಲ್ಲಿ 264 ರನ್‌ಗೆ 9 ವಿಕೆಟ್ ಕಳೆದುಕೊಂಡು ಗೌರವಾರ್ಹ ಮೊತ್ತ ದಾಖಲಿಸಿದೆ.
ಇಲ್ಲಿಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕಕ್ಕೆ ರಾಷ್ಟ್ರೀಯ ತಂಡದ ಆಟಗಾರ ಮಾಯಾಂಕ್ ಅಗರ್ವಾಲ್ ಹಾಗೂ ಅನುಭವಿ ದಾಂಡಿಗ ಆರ್.ಸಮರ್ಥ್ ಉತ್ತಮ ಆರಂಭ ಒದಗಿಸುತ್ತಾರೆ ಎಂಬ ನಿರೀಕ್ಷೆ ಬಲವಾಗಿತ್ತು. ಆದರೆ ಆ ನಿರೀಕ್ಷೆಯನ್ನು ಕೆಲವೇ ಗಂಟೆಗಳಲ್ಲಿ ಸುಳ್ಳಾಗಿಸಿದ್ದು ಸೌರಾಷ್ಟ್ರ ತಂಡದ ನಾಯಕ ಉನಾದ್ಕತ್. ಉತ್ತಮ ಲಯದಲ್ಲಿದ್ದ ಕರ್ನಾಟಕದ ಡಿ.ನಿಶ್ಚಲ್ ಅವರನ್ನು ಈ ಪಂದ್ಯದಿಂದ ಹೊರಗಿಡಲಾಗಿತ್ತು. ಅವರ ಸ್ಥಾನದಲ್ಲಿ ತಂಡ ಸೇರಿಕೊಂಡ ಅಗರ್ವಾಲ್ 30 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ಉನಾದ್ಕತ್ ಎಸೆತದಲ್ಲಿ ಸ್ನೆಲ್ ಪಟೇಲ್‌ಗೆ ಕ್ಯಾಚಿತ್ತರು. ಇದಕ್ಕೂ ಮೊದಲು ಖಾತೆ ತೆರೆಯುವ ಮುನ್ನವೇ ಸಮರ್ಥ್(0) ಉನಾದ್ಕತ್ ಅವರ ಎಲ್‌ಬಿಡಬ್ಲು ಬಲೆಗೆ ಬಿದ್ದಾಗಿತ್ತು. ಭರವಸೆಯ ದಾಂಡಿಗ ಕೆ.ಸಿದ್ಧಾರ್ಥ್(12) ಆಟ ನಡೆಯಲಿಲ್ಲ. ಅವರು ಕೂಡ ಉನಾದ್ಕತ್ ಬೀಸಿದ ಎಲ್‌ಬಿಡಬ್ಲು ಬಲೆಗೆ ಸಿಲುಕಿದರು. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಿಂಚಿದ್ದ ಕರುಣ್(9), ಸಕಾರಿಯಾ ಎಸೆತದಲ್ಲಿ ಕೀಪರ್ ಸ್ನೆಲ್ ಪಟೇಲ್‌ಗೆ ಕ್ಯಾಚಿತ್ತರು. ಈ ವೇಳೆ ಕರ್ನಾಟಕ ಒಟ್ಟು ಮೊತ್ತ 30 ರನ್; ಪತನವಾಗಿದ್ದು ನಾಲ್ಕು ವಿಕೆಟ್. ಆಗ ಕ್ರೀಸ್‌ನಲ್ಲಿದ್ದ ಮನೀಷ್ ಪಾಂಡೆ(62) ವೇಗವಾಗಿ ರನ್ ಸೇರಿಸುತ್ತಾ ಆತಿಥೇಯ ತಂಡಕ್ಕೆ ಅಕ್ಷರಶಃ ಆಪತ್ಭಾಂದವರಾದರು. ಅವರನ್ನು ಸೇರಿಕೊಂಡ ಆಲ್‌ರೌಂಡರ್ ಶ್ರೇಯಸ್ ಗೋಪಾಲ್(87) ತಾಳ್ಮೆಯ ಆಟಕ್ಕೆ ಮೊರೆ ಹೋದರು. ಇವರಿಬ್ಬರೂ 5ನೇ ವಿಕೆಟ್‌ಗೆ 106 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಲು ಶ್ರಮವಹಿಸಿದರು. ಪಾಂಡೆ ಅವರು ಉನಾದ್ಕತ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ಶರತ್ ಜೊತೆಗೂಡಿದ ಗೋಪಾಲ್ 6ನೇ ವಿಕೆಟ್‌ಗೆ 96 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ವೈಯಕ್ತಿಕ ಶತಕದ ಅಂಚಿನಲ್ಲಿದ್ದ ಗೋಪಾಲ್ , ಮಕ್ವಾನಾ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ನಿರಾಶೆಗೊಂಡು ಪೆವಿಲಿಯನ್‌ಗೆ ಮರಳಿದರು. ಶರತ್ ಅವರ ಜವಾಬ್ದಾರಿಯುತ ಬ್ಯಾಟಿಂಗ್(ಅಜೇಯ 74) ತಂಡಕ್ಕೆ ಭಾರೀ ಅನುಕೂಲವಾಗಿದೆ. ಈ ಹಂತದಲ್ಲಿ ಬೌಲರ್‌ಗಳಾದ ವಿನಯಕುಮಾರ್(2), ಕೆ.ಗೌತಮ್(2), ಮಿಥುನ್(4) ವೈಫಲ್ಯ ಅನುಭವಿಸಿದರು. ರೋನಿತ್(0) ಹಾಗೂ ಶರತ್ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸೌರಾಷ್ಟ್ರ ಪರ ಉನಾದ್ಕತ್ 4 ವಿಕೆಟ್ ಪಡೆದರೆ, ಕಮಲೇಶ್ ಮಕ್ವಾನಾ 3 ವಿಕೆಟ್ ಕಬಳಿಸಿದರು. ಸಕಾರಿಯಾ ಹಾಗೂ ಧರ್ಮೇಂದ್ರ ಜಡೇಜ ತಲಾ 1 ವಿಕೆಟ್ ಗಳಿಸಿದರು.







