ವಿಶ್ವದ ಗರಿಷ್ಠ ಏಕದಿನ ರನ್ ಸರದಾರರ ಪಟ್ಟಿಗೆ ಕೊಹ್ಲಿ
ಬ್ರಿಯಾನ್ ಲಾರಾರನ್ನು ಹಿಂದಿಕ್ಕಿದ ಭಾರತದ ನಾಯಕ

ನೇಪಿಯರ್, ಜ.24: ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಗ್ರ-10 ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ ವೆಸ್ಟ್‌ಇಂಡೀಸ್ ದಂತಕತೆ ಬ್ರಿಯಾನ್ ಲಾರಾರನ್ನು ಹಿಂದಿಕ್ಕಿದ ಭಾರತದ ನಾಯಕ ವಿರಾಟ್ ಕೊಹ್ಲಿಯ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಇಲ್ಲಿನ ಮೆಕ್‌ಲಿಯಾನ್ ಪಾರ್ಕ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ 30ರ ಹರೆಯದ ಕೊಹ್ಲಿ ಅವರು ಲಾರಾ ದಾಖಲೆಯನ್ನು ಹಿಂದಿಕ್ಕಿ ಸಾರ್ವಕಾಲಿಕ ಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ ಅಗ್ರ-10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.ಕಾಂಗರೂನಾಡಿನಲ್ಲಿ ಭಾರತಕ್ಕೆ ಟೆಸ್ಟ್ ಸರಣಿ ಗೆದ್ದುಕೊಟ್ಟ ಮೊದಲ ನಾಯಕ ಎನಿಸಿಕೊಂಡಿದ್ದ ಕೊಹ್ಲಿಗೆ ಲಾರಾ ದಾಖಲೆಯನ್ನು ಮುರಿಯಲು 21 ರನ್ ಅಗತ್ಯವಿತ್ತು.
ಕಿವೀಸ್ ವಿರುದ್ಧ ಬುಧವಾರ 59 ಎಸೆತಗಳಲ್ಲಿ 45 ರನ್ ಗಳಿಸಿದ ಕೊಹ್ಲಿ ತನ್ನ ತಂಡ ವಿಲಿಯಮ್ಸ್ ಬಳಗದ ವಿರುದ್ಧ 8 ವಿಕೆಟ್‌ಗಳಿಂದ ಜಯ ಸಾಧಿಸಲು ನೆರವಾಗಿದ್ದರು.
ಕೊಹ್ಲಿ ಪ್ರಸ್ತುತ 212 ಇನಿಂಗ್ಸ್‌ಗಳಲ್ಲಿ ಒಟ್ಟು 10,430 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ಲಾರಾ 289 ಇನಿಂಗ್ಸ್‌ಗಳಲ್ಲಿ 40.48ರ ಸರಾಸರಿಯಲ್ಲಿ 19 ಶತಕ ಹಾಗೂ 63 ಅರ್ಧಶತಕಗಳ ಸಹಿತ 10,405 ರನ್ ಗಳಿಸಿದ್ದರು.
‘ಮಾಸ್ಟರ್ ಬ್ಲಾಸ್ಟರ್’ ಸಚಿನ್ ತೆಂಡುಲ್ಕರ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ದಂತಕತೆ ತೆಂಡುಲ್ಕರ್ 452 ಏಕದಿನ ಇನಿಂಗ್ಸ್‌ಗಳಲ್ಲಿ 49 ಶತಕ, 96 ಅರ್ಧಶತಕಗಳನ್ನು ಸಿಡಿಸಿದ್ದಾರೆ.







