ಹಸಿದ ಹೊಟ್ಟೆಗೆ ಆಸರೆಯಾಗುತ್ತಿರುವ ವಿಜಯಪುರದ ಯುವಕರು: 'ಕ್ರಾಂತಿ' ತಂಡದಿಂದ ಜನ ಮೆಚ್ಚುವ ಕಾರ್ಯ

ವಿಜಯಪುರ,ಜ.24: ಹಸಿದವರ ಪಾಲಿಗೆ ಅನ್ನದಾತರಾಗಿ ವಿಜಯಪುರದ ಯುವಕರ ತಂಡವೊಂದು ಕ್ರಾಂತಿ ಅಸೋಸಿಯೇಶನ್ ಹೆಸರಿನಲ್ಲಿ ಸಂಘವೊಂದನ್ನು ಮಾಡಿ ಬಡವರ, ಅನಾಥರ, ನಿರ್ಗತಿಕರ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ವಿಜಯಪುರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ವಿಜಯಪುರದ ಗಲ್ಲಿ ಗಲ್ಲಿಗೆ ತಿರುಗಿ ಬಡವರ, ನಿರ್ಗತಿಕರ ಹಸಿವಿನಿಂದ ಕುಳಿತಿರುವವರಿಗೆ ಪ್ರತಿದಿನ ಊಟ ನೀಡುತ್ತಿರುವ ಈ ಯುವಕರ ತಂಡ, ರಾತ್ರಿ ವೇಳೆ ವಿಜಯಪುರ ನಗರದಾದ್ಯಂತ ಸಂಚರಿಸಿ ಹಸಿದವರಿಗೆ ಊಟ ನೀಡುತ್ತಿದೆ.
ದಿನಕ್ಕೆ 150-160 ಮಂದಿಗೆ ಊಟ: ಪ್ರತಿದಿನ ಈ ತಂಡವು ಅನ್ನ ಸೇರಿದಂತೆ ವಿವಿಧ ಬಗೆಯ ಅಡುಗೆ ತಯಾರಿಸಿ ನಗರದಲ್ಲಿ ಸಂಚರಿಸಿ ನಗರದಲ್ಲಿರುವ ಬಡವರು, ಅನಾಥರು ಹಾಗೂ ನಿರ್ಗತಿಕರನ್ನು ಗುರುತಿಸಿ ಅವರಿಗೆ ಊಟ ನೀಡುತ್ತಿದೆ. "ಪ್ರತಿದಿನ 150-160 ಜನರಿಗೆ ನಾವು ಊಟ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರಿಗೆ ಊಟ ನೀಡಲಾಗುವುದು ಎಂದು ಕ್ರಾಂತಿ ಅಸೋಸಿಯೇಶನ್ ಮುಖ್ಯಸ್ಥ ಅಝೀಮ್ ಇನಾಮದಾರ 'ವಾರ್ತಾಭಾರತಿ'ಗೆ ಮಾಹಿತಿ ನೀಡಿದ್ದಾರೆ.
ನಗರದ ಬಸ್ ಸ್ಟ್ಯಾಂಡ್, ರೈಲ್ವೆ ಸ್ಟೇಶನ್, ಖಾಜಾ ನಗರ, ಸ್ಟೇಶನ್ ಹಿಂದಿನ ರಸ್ತೆ, ಜುಮಾ ಮಸೀದಿ ಸೇರಿದಂತೆ ನಗರದ ವಿವಿಧ ಭಾಗಗಳಿಗೆ ಈ ತಂಡ ವಿಂಗಡಣೆಯಾಗಿ ಸಂಚರಿಸಿ ಊಟ ಮುಟ್ಟಿಸುವ ಕೆಲಸ ಮಾಡುತ್ತಿದೆ.
ಕಳೆದ ಒಂದು ತಿಂಗಳಿಂದ ಈ ಕಾರ್ಯ ಮಾಡುತ್ತಿರುವ ಈ ತಂಡ ಮೊದಲಿಗೆ 15-20 ಯುವಕರು ಕೂಡಿ ತಮ್ಮಲ್ಲಿರುವ ಹಣದೊಂದಿಗೆ 3 ಪ್ಯಾಕೆಟ್ ಖರೀದಿಸಿ ಅದನ್ನು ನೀಡಲು ಪ್ರಾರಂಭಿಸಿದರು. ಈಗ 150-160 ಪ್ಯಾಕೆಟ್ ವಿತರಿಸುತ್ತಿದ್ದಾರೆ. ಇದಕ್ಕೆ ಈಗ ಜನರು ಖುದ್ದಾಗಿ ದೇಣಿಗೆ ನೀಡಲು ಮುಂದಾಗಿದ್ದು, ಯುವಕರಿಗೆ ಮತ್ತಷ್ಟು ಪ್ರೊತ್ಸಾಹಿಸಿದಂತಾಗಿದೆ.
ಹಳೆ ಬಟ್ಟೆ ಹಂಚಿಕೆ: ಕೇವಲ ಊಟ ಮಾತ್ರವಲ್ಲದೆ ಈ ತಂಡವು ತಮ್ಮ ಮನೆಯಲ್ಲಿರುವ ಹಳೆ ಬಟ್ಟೆ ಹಾಗೂ ಬೇಡ್ ಶೀಟ್ ಗಳನ್ನು ರಸ್ತೆ ಮೇಲೆ ನಿರ್ಗತಿಕರಾಗಿ ಮಲಗುವವರಿಗೆ ಹಂಚಿಕೆ ಮಾಡುತ್ತಿದೆ. ಮನೆಯಲ್ಲಿನ ಹಳೆ ಬಟ್ಟೆ, ಬೆಡ್ ಶೀಟ್ ಗಳನ್ನು ಒಗ್ಗೂಡಿಸಿ ಅದನ್ನು ಹಂಚಿಕೆ ಮಾಡುವ ಜವಾಬ್ದಾರಿಯನ್ನು ಈ ತಂಡ ಹೊತ್ತುಕೊಂಡಿದೆ.
ವೃದ್ಧಾಶ್ರಮ: ಈಗಾಗಲೇ ಈ ತಂಡವು ನಿರ್ಗತಿಕರಲ್ಲಿ ಅತಿ ಅವಶ್ಯವಿರುವವರಿಗೆ ತಮ್ಮ ಕಚೇರಿಯಲ್ಲಿಯೇ ವಾಸ್ತವ್ಯ ಹೂಡಲು ಅವಕಾಶ ನೀಡಿದ್ದು, ಮುಂದಿನ ದಿನಗಳಲ್ಲಿ ಸರಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ವಿಜಯಪುರ ನಗರದಲ್ಲೊಂದು ವೃದ್ಧಾಶ್ರಮ ಮಾಡುವ ಗುರಿ ಈ ತಂಡ ಹೊಂದಿದೆ. ವೃದ್ಧಾಶ್ರಮ ನಿರ್ಮಿಸಿ ರಸ್ತೆಯ ಮೇಲೆ ಇರುವ ನಿರ್ಗತಿಕರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗುವುದು ಮತ್ತು ಪ್ರತಿದಿನ ಅವರಿಗೆ ಊಟ ನೀಡಲಾಗುವುದು ಎಂದು ಅಝೀಮ್ ಮಾಹಿತಿ ನೀಡಿದರು.














