ಡೇವಿಸ್ ಕಪ್ ನಾಯಕತ್ವ ಕಳೆದುಕೊಳ್ಳಲಿದ್ದಾರೆಯೇ ಮಹೇಶ್ ಭೂಪತಿ?
ಹೊಸದಿಲ್ಲಿ, ಜ.24: ಭಾರತ ಟೆನಿಸ್ ತಂಡ ಒಂದು ವೇಳೆ ವಿಶ್ವ ಗ್ರೂಪ್ ಫೈನಲ್ಸ್‌ಗೆ ಅರ್ಹತೆ ಗಳಿಸುವಲ್ಲಿ ವಿಫಲವಾದರೆ ಮಹೇಶ್ ಭೂಪತಿ ಅವರ ಡೇವಿಸ್ ಕಪ್ ನಾಯಕತ್ವಕ್ಕೆ ಸಂಚಕಾರ ಒದಗುವ ಲಕ್ಷಣಗಳಿವೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಟೆನಿಸ್ ಫೆಡರೇಶನ್ ಭೂಪತಿ ಅವರ ನಾಯಕತ್ವದ ಗುತ್ತಿಗೆಯನ್ನು ಮುಂದುವರಿಸಲಾರದು ಎನ್ನಲಾಗಿದೆ. ಅಸಾಧಾರಣ ತಂಡವಾದ ಇಟಲಿಗಿಂತ ಭಾರತ ಮುಂದಿದ್ದರೂ ಕೋಲ್ಕತಾ ಸೌತ್ ಕ್ಲಬ್‌ನ ಹಸಿರು ಅಂಗಣದ ಹಾರ್ಡ್‌ಕೋಟ್‌ನಲ್ಲಿ ಇಟಲಿ ತಂಡ ಪರಿಣತಿ ಸಾಧಿಸಿರುವುದು ಆತಿಥೇಯರಿಗೆ ಅಲ್ಪ ತಲೆನೋವು ತಂದಿದೆ.
ಈ ಹಿಂದೆ ಇಟಲಿ ವಿರುದ್ಧ ನಡೆದ 5 ಪಂದ್ಯಾವಳಿಗಳಲ್ಲಿ 1985ರಲ್ಲಿ ಮಾತ್ರ ಭಾರತ ಜಯ ಸಾಧಿಸಿತ್ತು. ಡೇವಿಸ್ ಕಪ್‌ನಲ್ಲಿ ವಿಜಯ ಸಾಧಿಸುವ ತಂಡ, ಇದೇ ವರ್ಷದ ನವೆಂಬರ್‌ನಲ್ಲಿ ಮ್ಯಾಡ್ರಿಡ್‌ನಲ್ಲಿ ನಡೆಯುವ ವಿಶ್ವ ಗ್ರೂಪ್ ಫೈನಲ್ಸ್‌ನ ಉದ್ಘಾಟನಾ ಪಂದ್ಯದಲ್ಲಿ ಸ್ಪರ್ಧಿಸಲಿದ್ದಾರೆ. ಒಂದು ವೇಳೆ ಭಾರತ ಏಶ್ಯ/ ಓಶಿನಿಯಾ ಪ್ರಥಮ ಗುಂಪಿನಲ್ಲಿ ಉಳಿದುಕೊಂಡರೆ, ಈ ಸ್ಪರ್ಧೆಯ ನಂತರ ಭೂಪತಿಯ ನಾಯಕತ್ವದ ಅವಧಿ ಮುಗಿಯಲಿದ್ದು, ಅಖಿಲ ಭಾರತ ಟೆನಿಸ್ ಅಸೋಸಿಯೇಶನ್(ಎಐಟಿಎ) ನೂತನ ನಾಯಕನ ಹುಡುಕಾಟ ನಡೆಸಲಿದೆ ಎಂದು ತಿಳಿದುಬಂದಿದೆ.
‘‘ಹೌದು, ನಿರೀಕ್ಷಿತ ಫಲಿತಾಂಶ ಬಾರದಿದ್ದರೆ ಭೂಪತಿಯನ್ನು ನಾಯಕತ್ವ ಸ್ಥಾನದಲ್ಲಿ ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಮುಂದಿನ ವರ್ಷದವರೆಗೆ ಯಾವುದೇ ಸ್ಥಳೀಯ ಪಂದ್ಯಗಳು ಇಲ್ಲದಿರುವುದರಿಂದ ಎಐಟಿಎಗೆ ಬೇರೆ ನಾಯಕನ ಆಯ್ಕೆ ಕುರಿತು ಗಮನಹರಿಸಲು ಸಮಯ ಸಿಕ್ಕಿದೆ’’ ಎಂದು ಎಐಟಿಎ ಮೂಲಗಳು ಪಿಟಿಐಗೆ ತಿಳಿಸಿವೆ.







