ಲಿಪಿಡ್ ಪ್ರೊಫೈಲ್ ಟೆಸ್ಟ್ ಏಕೆ ಅಗತ್ಯ?
ಇಂದಿನ ಯಾಂತ್ರಿಕ ಯುಗದಲ್ಲಿ ಹೆಚ್ಚಿನವರು ಬೆಳಗ್ಗೆಯಿಂದ ರಾತ್ರಿಯವರೆಗೆ ವ್ಯಸ್ತರಾಗಿರುತ್ತಾರೆ. ಹೀಗಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನೂ ಮರೆಯುತ್ತಾರೆ. ಸಮಯದ ಕೊರತೆಯಿಂದಾಗಿ ಹೊರಗೆ ಆಹಾರ ಸೇವಿಸುವ ಅನಿವಾರ್ಯ ಸಂದರ್ಭಗಳು ಒದಗುತ್ತವೆ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಲೂ ಸಾಧ್ಯವಾಗುವುದಿಲ್ಲ. ಹೀಗಾಗಿ ನಮಗೆ ಗೊತ್ತಿಲ್ಲದೆ ಆರೋಗ್ಯ ಸಮಸ್ಯೆಗಳು ನಮ್ಮಲ್ಲಿ ಮನೆ ಮಾಡಿಕೊಂಡಿರುತ್ತವೆ.
ಲಿಪಿಡ್ ನಮ್ಮ ಶರೀರದ ಪ್ರಮುಖ ಆರೋಗ್ಯ ಮಾನದಂಡಗಳಲ್ಲೊಂದಾಗಿದ್ದು, ಹೆಚ್ಚಿನವರಲ್ಲಿ ಇದು ವ್ಯತ್ಯಯಗೊಂಡಿರುತ್ತದೆ. ಸದ್ಯೋಭವಿಷ್ಯದಲ್ಲಿ ಲಿಪಿಡ್ ಮಟ್ಟಗಳಲ್ಲಿ ಏರುಪೇರಾಗುವುದನ್ನ್ನು ತಡೆಯಲು ನಿಯಮಿತವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವಾಗುತ್ತದೆ. ಹೆಚ್ಚಿನವರು ಆಗಾಗ್ಗೆ ಅಧಿಕ ಕ್ಯಾಲೊರಿಗಳನ್ನೊಳಗೊಂಡಿರುವ ಬರ್ಗರ್, ಪಿಜ್ಜಾ ಇತ್ಯಾದಿಗಳಂತಹ ಸಂಸ್ಕರಿತ ಆಹಾರಗಳನ್ನು ಸೇವಿಸುತ್ತಿರುತ್ತಾರೆ. ಇಂತಹ ಆಹಾರಗಳು ನಮ್ಮ ಕ್ಯಾಲೊರಿ ಸೇವನೆಯನ್ನು ಹೆಚ್ಚಿಸುವುದು ಮಾತ್ರವಲ್ಲ, ಕೊಲೆಸ್ಟ್ರಾಲ್ ಮತ್ತು ಅನಾರೋಗ್ಯಕರ ಕೊಬ್ಬುಗಳನ್ನು ಹೆಚ್ಚಿಸುತ್ತವೆ. ಇವು ನಮ್ಮ ರಕ್ತನಾಳಗಳಲ್ಲಿ ಶೇಖರಗೊಳ್ಳುತ್ತವೆ. ಇದರ ಜೊತೆಗೆ ಬದಲಾವಣೆಯಿಲ್ಲದ ಜೀವನಶೈಲಿ ಮತ್ತು ದೈಹಿಕ ಚಟುವಟಿಕೆಗಳ ಕೊರತೆ ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತವೆ.
ಏಕೆ ಅಗತ್ಯ?
ನಿಮ್ಮದು ನಿಂತ ನೀರಿನಂತಿರುವ ಜೀವನಶೈಲಿಯಾಗಿದ್ದರೆ, ಅನಾರೋಗ್ಯಕರ ಆಹಾರಗಳನ್ನು ಸೇವಿಸುತ್ತಿದ್ದರೆ ಅಥವಾ ಧೂಮ್ರಪಾನ, ಬೊಜ್ಜು, ಅಧಿಕ ರಕ್ತದೊತ್ತಡ, ಮಧುಮೇಹದಂತಹ ಹೃದ್ರೋಗದ ಅಪಾಯವನ್ನು ತರಬಲ್ಲ ಕಾರಣಗಳನ್ನು ಹೊಂದಿದ್ದರೆ ನೀವು ಖಂಡಿತವಾಗಿ ಲಿಪಿಡ್ ಪ್ರೊಫೈಲ್ ಟೆಸ್ಟ್‌ನ್ನು ಮಾಡಿಸಿಕೊಳ್ಳಬೇಕಾಗುತ್ತದೆ.
ಅತಿಯಾಗಿ ಬೆವರುವಿಕೆ, ಉಸಿರಾಟದ ತೊಂದರೆ, ಎದೆಯಲ್ಲಿ ನೋವು ಅಥವಾ ಎದೆ ಕಟ್ಟಿದಂತಾಗುತ್ತಿದ್ದರೆ, ತೋಳುಗಳಲ್ಲಿ ವಿಶೇಷವಾಗಿ ಎಡತೋಳಿನಲ್ಲಿ ನೋವು, ವಾಂತಿ ಅಥವಾ ವಾಕರಿಕೆಯಂತಹ ಲಕ್ಷಣಗಳು ಕಂಡುಬಂದರೂ ಲಿಪಿಡ್ ಪೊಫೈಲ್ ಟೆಸ್ಟ್ ಸೇರಿದಂತೆ ಸಂಭಾವ್ಯ ಹೃದ್ರೋಗಗಳಿಗಾಗಿ ತಪಾಸಣೆ ಅಗತ್ಯವಾಗುತ್ತದೆ.
ಏನಿದು ಲಿಪಿಡ್ ಪ್ರೊಫೈಲ್ ಟೆಸ್ಟ್?
ಲಿಪಿಡ್ ಪ್ರೊಫೈಲ್ ಟೆಸ್ಟ್ ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟಿನ್(ಕೊಲೆಸ್ಟ್ರಾಲ್ ಎಚ್‌ಡಿಎಲ್), ಕಡಿಮೆ ಸಾಂದ್ರತೆಯ ಲಿಪೊಪ್ರೋಟಿನ್ (ಕೊಲೆಸ್ಟ್ರಾಲ್ ಎಲ್‌ಡಿಎಲ್), ಅತ್ಯಂತ ಕಡಿಮೆ ಸಾಂದ್ರತೆಯ ಲಿಪೊಪ್ರೋಟಿನ್ (ವಿಎಲ್‌ಡಿಎಲ್), ಟ್ರೈಗ್ಲಿಸರೈಡ್‌ಗಳು, ಎಲ್‌ಡಿಎಲ್/ಎಚ್‌ಡಿಎಲ್ ಅನುಪಾತ, ಕೊಲೆಸ್ಟ್ರಾಲ್- ಟೋಟಲ್ ಮತ್ತು ಟೋಟಲ್ ಕೊಲೆಸ್ಟ್ರಾಲ್/ಎಚ್‌ಡಿಎಲ್ ಅನುಪಾತ ಇವುಗಳ ಪರೀಕ್ಷೆಗಳನ್ನೊಳಗೊಂಡಿರುತ್ತದೆ.
ಕೊಲೆಸ್ಟ್ರಾಲ್ ಎಂದರೇನು?
ಕೊಲೆಸ್ಟ್ರಾಲ್ ಜೀವಕೋಶಗಳ ಬಾಹ್ಯ ವಪೆಗಳಲ್ಲಿರುವ ಒಂದು ವಿಧದ ಕೊಬ್ಬು ಆಗಿದ್ದು, ಇದು ಈ ವಪೆಗಳ ಸ್ಥಿರತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ವಿವಿಧ ಮಾದರಿಗಳ ಎಲ್ಲ ಕೊಲೆಸ್ಟ್ರಾಲ್‌ಗಳನ್ನು ಒಟ್ಟಾಗಿ ಲಿಪಿಡ್ ಎಂದು ಕರೆಯಲಾಗುತ್ತದೆ. ಕೊಲೆಸ್ಟ್ರಾಲ್‌ನ್ನು ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಹೀಗೆ ಎರಡು ವರ್ಗಗಳಲ್ಲಿ ವಿಭಜಿಸಲಾಗಿದೆ.
ಎಚ್‌ಡಿಎಲ್ ಒಳ್ಳೆಯ ಕೊಲೆಸ್ಟ್ರಾಲ್ ಆಗಿದ್ದರೆ ಎಲ್‌ಡಿಎಲ್ ಕೆಟ್ಟ ಕೊಲೆಸ್ಟ್ರಾಲ್ ಆಗಿದೆ. ಎಲ್‌ಡಿಎಲ್ ರಕ್ತನಾಳದ ಭಿತ್ತಿಗಳಲ್ಲಿ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ. ಇದರಿಂದ ರಕ್ತನಾಳಗಳು ಸಂಕುಚಿತಗೊಂಡು ಹೃದಯಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗದೆ ಹೃದ್ರೋಗಗಳಿಗೆ ಕಾರಣವಾಗುತ್ತದೆ. ಎಚ್‌ಡಿಎಲ್ ಈ ಎಲ್‌ಡಿಎಲ್ ಮಟ್ಟವನ್ನು ತಗ್ಗಿಸುತ್ತದೆ. ಸಾಮಾನ್ಯವಾಗಿ ಎಚ್‌ಡಿಎಲ್ ಮಟ್ಟ ಪುರುಷರಲ್ಲಿ 40 ಎಂಜಿ/ಡಿಎಲ್ ಮತ್ತು ಮಹಿಳೆಯರಲ್ಲಿ 50 ಎಂಜಿ/ಡಿಎಲ್‌ಗಿಂತ ಹೆಚ್ಚಿರಬೇಕಾಗುತ್ತದೆ ಮತ್ತು ಎಲ್‌ಡಿಎಲ್ ಮಟ್ಟವು 100 ಎಂಜಿ/ಡಿಎಲ್‌ಗಿಂತ ಕಡಿಮೆಯಿರುವುದು ಅಪೇಕ್ಷಣೀಯವಾಗಿದೆ. ಎಲ್‌ಡಿಎಲ್ ಮಟ್ಟ 160 ಎಂಜಿ/ಡಿಎಲ್‌ಗಿಂತ ಹೆಚ್ಚಿದ್ದರೆ ಹೃದ್ರೋಗ ಬಾಧಿಸುವ ಅಪಾಯವಿರುತ್ತದೆ. ಇದೇ ರೀತಿ ಟ್ರೈಗ್ಲಿಸರೈಡ್‌ಗಳ ಮಟ್ಟ 150 ಎಂಜಿ/ಡಿಎಲ್‌ಗಿಂತ ಕಡಿಮೆಯಿರಬೇಕು.
ಎಲ್‌ಡಿಎಲ್ ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟ ಹೆಚ್ಚಿದ್ದಷ್ಟೂ ಹೃದ್ರೋಗಳ ಅಪಾಯ ಹೆಚ್ಚುತ್ತದೆ. ಹೀಗಾಗಿ ನಿಯಮಿತವಾಗಿ ಲಿಪಿಡ್ ಪ್ರೊಫೈಲ್ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದರೆ ಇವು ಸಹಜ ಮಟ್ಟದಲ್ಲಿವೆಯೇ ಇಲ್ಲವೇ ಎನ್ನುವುದು ಗೊತ್ತಾಗುತ್ತದೆ.