ಸಿಬಿಐ ನಿರ್ದೇಶಕ ಹುದ್ದೆ: ನಿರ್ಧಾರಕ್ಕೆ ಬಾರದ ಆಯ್ಕೆ ಸಮಿತಿ

ಹೊಸದಿಲ್ಲಿ, ಜ. 25: ಸಿಬಿಐ ನಿರ್ದೇಶಕ ಹುದ್ದೆಗೆ ಅರ್ಹತೆ ಹೊಂದಿರುವ ಸಂಭಾವ್ಯ ಐಎಎಸ್ ಅಧಿಕಾರಿಗಳ ವಿವರಗಳನ್ನು ಅಧ್ಯಯನ ಮಾಡಲು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ, ಗುರುವಾರ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.
"ಇಂದಿನ ಸಭೆಯಲ್ಲಿ ಸಿಬಿಐ ನಿರ್ದೇಶಕ ಹುದ್ದೆಗೆ ಯಾವ ಹೆಸರನ್ನೂ ಅಂತಿಮಪಡಿಸಿಲ್ಲ. ಅರ್ಹ ಹೆಸರುಗಳ ವಿವರಗಳನ್ನು ಆಯ್ಕೆ ಸಮಿತಿ ಸದಸ್ಯರಿಗೆ ನೀಡಲಾಗಿದೆ. ಶೀಘ್ರವೇ ಸಮಿತಿ ಮತ್ತೆ ಸಭೆ ಸೇರಿ ಮುಂದಿನ ನಿರ್ದೇಶಕರನ್ನು ನೇಮಕ ಮಾಡುವ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಿದೆ" ಎಂದು ಉನ್ನತ ಮೂಲಗಳು ಹೇಳಿವೆ.
ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯಲ್ಲಿ ವಿರೋಧ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಇದ್ದಾರೆ. ಆಸ್ತಾನ ಹಾಗೂ ಅಲೋಕ್ ವರ್ಮಾ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಈ ಬಾರಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಮಿತಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಜನವರಿ 10ರಂದು ನಡೆದ ಸಭೆಯಲ್ಲಿ ಅಲೋಕ್ ವರ್ಮಾ ಅವರನ್ನು ಪದಚ್ಯುತಗೊಳಿಸಲಾಗಿದ್ದರೆ, ಆಸ್ತಾನಾ ಒಂದು ವಾರ ಬಳಿಕ ಸಿಬಿಐನಿಂದ ಹೊರ ನಡೆದಿದ್ದರು.
ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲದಂತೆ ಮಾಡುವ ಸಲುವಾಗಿ 1982ರಿಂದ 1985ನೇ ಬ್ಯಾಚ್ನ ಅರ್ಹ ಐಪಿಎಸ್ ಅಧಿಕಾರಿಗಳ ವಿವರಗಳನ್ನು ಸದಸ್ಯರಿಗೆ ನೀಡಲಾಗಿದೆ. ಸೂಕ್ತ ವ್ಯಕ್ತಿಯ ಬಗ್ಗೆ ಸಮಿತಿ ಒಮ್ಮತಕ್ಕೆ ಬರಲಿದೆ ಎಂದು ಹೇಳಲಾಗಿದೆ.