ಮಂಗಳೂರು: ಎ.ಜೆ. ಆಸ್ಪತ್ರೆಯಲ್ಲಿ ಮೊದಲ ಅಸ್ಥಿಮಜ್ಜೆ ಕಸಿ

ಮಂಗಳೂರು, ಜ.25: ನಗರದ ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಪ್ರಥಮ ಅಸ್ಥಿಮಜ್ಜೆ (Bone Marrow)ಕಸಿ ನಡೆಯಿತು.
ಉತ್ತರ ಕನ್ನಡದ ಮೂಲದ 55 ವರ್ಷದ ವ್ಯಕ್ತಿಯೊಬ್ಬರು ತೀವ್ರ ತೆರನಾದ ಬೆನ್ನು ನೋವಿನಿಂದ ಬಳಲುತ್ತಿದ್ದರು. ಅವರಿಗೆ ರಕ್ತ ಸಂಬಂಧಿ ಕ್ಯಾನ್ಸರ್ (multiple myeloma) ಇರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತು. ಅದು ಎಲುಬುಗಳಿಗೆ ಹರಡಿ ಅವುಗಳನ್ನು ದುರ್ಬಲಗೊಳಿಸಿತ್ತು. ಅವರಿಗೆ ನಾಲ್ಕು ತಿಂಗಳ ಕಾಲ ಕೀಮೋಥೆರಪಿ ಚಿಕಿತ್ಸೆ ನೀಡಿ ಬಳಿಕ ಅವರದೇ ದೇಹದ ಅಸ್ಥಿ ಮಜ್ಜೆಯನ್ನು ಕಸಿ ಮಾಡಲಾಯಿತು.
ಸ್ವಂತ ದೇಹದ ಎಲುಬಿನ ಪೊಳ್ಳು ಭಾಗದಲ್ಲಿರುವ ಕೊಬ್ಬಿನಂಶವುಳ್ಳ ರಸ(ಅಸ್ಥಿಮಜ್ಜೆ)ವನ್ನು ಕಸಿ ಮಾಡುವುದು ಮೂರು ಹಂತಗಳನ್ನು ಒಳಗೊಂಡಿದೆ. ಅಸ್ಥಿಮಜ್ಜೆ ಸಂಗ್ರಹ, ಹೆಚ್ಚಿನ ಪ್ರಮಾಣದ ಕೀಮೋಥೆರಪಿ ನೀಡುವಿಕೆ ಮತ್ತು ಅಸ್ಥಿಮಜ್ಜೆ ವರ್ಗಾವಣೆ.
ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಅವರ ಎಲುಬಿನ ಸಾಮರ್ಥ್ಯ ಕ್ಯಾನ್ಸರ್‌ನಿಂದಾಗಿ ಕುಗ್ಗಿತ್ತು. ನಾಲ್ಕು ದಿನಗಳ ಕಾಲ ಬೆಳವಣಿಗೆಗೆ ಸಂಬಂಧಿಸಿದ ಆರೈಕೆ ನೀಡಲಾಯಿತು. ಆ ಬಳಿಕ ಅವರ ಅಸ್ಥಿಮಜ್ಜೆ ಬೆಳೆಸಲಾಯಿತು. ರೋಗಿಗೆ ಪ್ರಬಲ ಕೀಮೋಥೆರಪಿ ನೀಡಲಾಯಿತು. ಹಿಂದೆ ಸಂಗ್ರಹಿಸಿದ ಅಸ್ಥಿ ಮಜ್ಜೆಯನ್ನು ಮರುದಿನ ಅವರ ದೇಹಕ್ಕೆ ವರ್ಗಾಯಿಸಲಾಯಿತು. ರೋಗಿಯನ್ನು ಸಂಪೂರ್ಣ ಕ್ರಿಮಿ ನಿರ್ಬಂಧಿತ ವಿಶೇಷ ಕೋಣೆಯಲ್ಲಿರಿಸಿ ಗುಣಮುಖರಾಗುವ ತನಕ ಆರೈಕೆ ಮಾಡಲಾಯಿತು.
ಎ.ಜೆ. ಆಸ್ಪತ್ರೆಯು ಕಿಡ್ನಿ ಕಸಿ, ಲಿವರ್ ಕಸಿ, ಅಸ್ಥಿಮಜ್ಜೆ ವರ್ಗಾವಣೆ/ಕಸಿ ಮಾಡಬಲ್ಲ ಸಮಗ್ರ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಮಂಗಳೂರಿನ ಏಕೈಕ ಆಸ್ಪತ್ರೆಯಾಗಿದೆ.
ಲಂಡನ್‌ನಲ್ಲಿ ಉನ್ನತ ವೈದ್ಯ ಶಿಕ್ಷಣ ಪಡೆದಿರುವ ಕ್ಯಾನ್ಸರ್ ತಜ್ಞ ವೈದ್ಯ ಡಾ. ರಚನ್ ಶೆಟ್ಟಿ ಮತ್ತವರ ತಂಡವು ಮೊದಲ ಅಸ್ಥಿಮಜ್ಜೆ ಕಸಿಯನ್ನು ಯಶಸ್ವಿಯಾಗಿ ನಡೆಸಿತು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ಕಸಿ ತಜ್ಞ ಡಾ. ಪ್ರಶಾಂತ ಮಾರ್ಲ ತಿಳಿಸಿದ್ದಾರೆ.







