ಮತದಾನ ಅಮೂಲ್ಯವಾದ ಶಕ್ತಿಯುತ ಸಾಧನ: ಎಚ್.ಕೆ. ಕೃಷ್ಣಮೂರ್ತಿ

ಪುತ್ತೂರು, ಜ. 25: ಮತದಾನವು ಅಮೂಲ್ಯವಾಗಿದ್ದು, ಪ್ರಜಾಪ್ರಭುತ್ವದಲ್ಲಿ ಶಕ್ತಿಯುತ ಸಾಧನವಾಗಿದೆ. ದೇಶದ ಆಗುಹೋಗುಗಳ ಕುರಿತು ಮಾತನಾಡುವ ನೈತಿಕತೆ ಬರಬೇಕಾದರೆ ನಾವು ಮೊದಲು ಮತ ಚಲಾಯಿಸಬೇಕು. ಎಂದು ಸಹಾಯಕ ಕಮೀಷನರ್ ಹೆಚ್.ಕೆ.ಕೃಷ್ಣಮೂರ್ತಿ ಹೇಳಿದರು.
ಅವರು ಶುಕ್ರವಾರ ಪುತ್ತೂರು ಸಮುದಾಯ ಭವನದಲ್ಲಿ ನಡೆದ ತಾಲೂಕು ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಹೊಸ ಮತದಾರರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ನೀಡಿ ಮಾತನಾಡಿದರು.
ಪ್ರಜಾಪ್ರಭುತ್ವ ಹೆಸರು ಹೇಳುವಂತೆ ನನ್ನನ್ನು ನಾನೆ ಆಳುವುದು ಎಂದರ್ಥ. ಇಲ್ಲಿ ಪ್ರಭುಗಳು ನಾವೆ ಆಗಿದ್ದೇವೆ. ಜನರ ಕಲ್ಯಾಣ, ಆಶೋತ್ತರ ಬರಿಸುವ ಯಾವ ಸಂಘಟನೆ, ಪಕ್ಷ, ನಾಯಕ ಇದ್ದಾರೆಯೋ ಅವರೇ ಈ ದೇಶದ ಅರ್ಹ ಎಂದು ಅವರಿಗೆ ಮತ ಹಾಕುವ ಮೂಲಕ ನನ್ನ ಪರವಾಗಿ ನೀನು ಆಳ್ವಿಕೆ ನಡೆಸು ಎಂದು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಜಾಪ್ರಭುತ್ವದ ಅಂಗವಾಗಿದೆ ಎಂದ ಅವರು ದೇಶವನ್ನು ಸುಭೀಕ್ಷೆಗೆ ಅಥವಾ ಸರ್ವನಾಶ ಮಾಡುವ ಜನರನ್ನು ಆಯ್ಕೆಯೂ ಕೂಡಾ ನಿಮ್ಮ ಕೈಯಲ್ಲಿದೆ ಎಂದರು.
ಜಾತಿ ಧರ್ಮಗಳನ್ನು ಬಿಟ್ಟು ಮತದಾನ ಮಾಡಿ ಜಾತಿ ಧರ್ಮಕ್ಕಿಂತ ಮಿಗಿಲಾದದ್ದು ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ಮತ್ತು ಸಂವಿಧಾನದ ಆಶಯ ಗಳನ್ನು ಈಡೇರಿಸುವ ಶಕ್ತಿ ಯಾವ ಪಕ್ಷಕ್ಕೆ ಇದೆ ಅಂತಹ ಪಕ್ಷವನ್ನು ಆರಿಸಿ, ಇತರರಿಗೂ ಜಾಗೃತಿ ಮೂಡಿಸಿ. ಮತ ಹಾಕದೆ ಆರೋಪ, ಪರ ವಿರೋಧ ಮಾತನಾಡುವ ಹಕ್ಕಿಲ್ಲ. ಈ ನಿಟ್ಟಿನಲ್ಲಿ ಮತದಾನ ಮಾಡುವಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಇವಿಎಂ ಮೆಷಿನ್ ಕುರಿತು ಗೊಂದಲ ಬಗ್ಗೆ ಅನೇಕ ಬಾರಿ ಚರ್ಚೆ ನಡೆದಿದತ್ತು. ಅದರೆ ಚುನಾವಣಾ ಆಯೋಗ ಇವಿಎಂ ಮೆಷಿನ್ ಅನ್ನು ಹ್ಯಾಂಗ್ ಮಾಡಲು ಇಡಿ ಜಗತ್ತಿಗೆ ಚಾಲೆಂಜ್ ಮಾಡಿದೆ ಎಂದಾದರೆ ಇವಿಎಂ ಮೆಷಿನ್‍ನಲ್ಲಿ ಗೊಂದಲ ಪಡಬೇಕಾದ ಅಗತ್ಯವಿಲ್ಲ. ಜಗತ್ತಿನ ಅತೀ ದೊಡ್ಡ ನೆಟ್‍ವರ್ಕ್ ಆಗಿರುವ ಗೂಗುಲ್ ಅನ್ನು ಯುವಕನೊಬ್ಬ ಹ್ಯಾಂಗ್ ಮಾಡಿ ತೋರಿಸಿದ್ದ. ಆದರೆ ಭಾರತದ ಇವಿಎಂ ಮೆಷಿನ್ ಅನ್ನು ಯಾರಿಗೂ ಹ್ಯಾಂಗ್ ಮಾಡಲು ಆಗುವುದಿಲ್ಲ. ಇದು ಭಾರತದ ಶಕ್ತಿ. ಇವತ್ತು ಜಗತ್ತಿನಾದ್ಯಂತ ಭಾರತದ ಪ್ರಜಾಪ್ರಭುತ್ವ ಚುನಾವಣೆ ಮಹತ್ವ ಪಡೆದಿದೆ ಎಂದು ಹೆಚ್.ಕೆ.ಕೃಷ್ಣಮೂರ್ತಿ ಹೇಳಿದರು.
ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಝೆವಿರ್ ಡಿ ಸೋಜ ಅವರು ಮತದಾನ ಜಾಗೃತಿ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಪುತ್ತೂರು ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್, ಪೌರಾಯುಕ್ತೆ ರೂಪಾ ಶೆಟ್ಟಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್ ಉಪಸ್ಥಿತರಿದ್ದರು. ಉಪ ತಹಸೀಲ್ದಾರ್ ಶ್ರೀಧರ್ ಕೋಡಿಜಾಲು ಸ್ವಾಗತಿಸಿ, ವಂದಿಸಿದರು.
ಸಭೆಯ ಬಳಿಕ ಜಿಡೆಕಲ್ಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ನಳಿನಾಕ್ಷಿ ಅವರು ಮತದಾನದ ಪ್ರತಿಜ್ಞಾ ವಿಧಿಯನ್ನು ಬೋದಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.







