ಜಾಗೃತ ಮತದಾರರಿಂದ ದೇಶದ ಪ್ರಗತಿ ಸಾಧ್ಯ: ಉಡುಪಿ ಜಿಲ್ಲಾ ನ್ಯಾಯಾಧೀಶರು

ಉಡುಪಿ, ಜ. 25: ದೇಶದ ಅಭಿವೃದ್ಧಿಯಲ್ಲಿ ಸರಕಾರಗಳು ಕೈಗೊಳ್ಳುವ ನಿರ್ಣಯಗಳ ಪಾತ್ರ ದೊಡ್ಡದು. ಸರಕಾರದ ಜನಪ್ರತಿನಿಧಿಗಳು ಜನಪರವಾಗಿ ಕಾರ್ಯ ನಿರ್ವಹಿಸಿದಲ್ಲಿ ದೇಶದ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮಹತ್ವದ ಜವಾಬ್ದಾರಿ ಮತದಾರ ರದ್ದಾಗಿದೆ. ಜಾಗೃತ ಮತದಾರರಿಂದ ಮಾತ್ರ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಸಿ.ಎಂ.ಜೋಷಿ ಹೇಳಿದ್ದಾರೆ.
ಶುಕ್ರವಾರ ಅಜ್ಜರಕಾಡಿನ ಪುರಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
18 ವರ್ಷಕ್ಕೆ ಮೇಲ್ಪಟ್ಟ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡು ತಪ್ಪದೇ ಮತ ಚಲಾಯಿಸಬೇಕು. ಮತ ಚಲಾವಣೆ ಯಿಂದ ಹಿಂದೆ ಸರಿದರೆ ಅಭಿವೃದ್ಧಿಯಿಂದ ಹಿಂದೆ ಸರಿದಂತೆ ಎಂದ ಅವರು, ಚುನಾವಣೆಗೆ ಸ್ಪರ್ಧಿಸುತ್ತಿರುವ ವ್ಯಕ್ತಿಗಳ ಬಗ್ಗೆ ಅಸಮಧಾನವಿದ್ದರೂ, ಚುನಾವಣಾ ಕಣದಲ್ಲಿರುವ ಅತ್ಯುತ್ತಮ ಅ್ಯರ್ಥಿ ಯಾರೆಂದು ನಿರ್ಧರಿಸಿ ಮತ ಚಲಾಯಿಸಬೇಕು. ಮತದಾನದಿಂದ ಹಿಂದೆ ಸರಿದರೆ, ತನ್ನ ಜವಾಬ್ದಾರಿಯಿಂದ ದೂರ ಸರಿದಂತೆ. ಜಾಗೃತ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿ ದರೆ ದೇಶ ಅಭಿವೃದ್ಧಿಯತ್ತ ಸಾಗುತ್ತದೆ. ಹೀಗಾಗಿ ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ ಎಂದು ಸಿ.ಎಂ.ಜೋಷಿ ನುಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ವಿವೇಕಾನಂದ ಎಸ್.ಪಂಡಿತ್ ಮಾತನಾಡಿ, ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಬೇಕು. ಪ್ರತಿಯೊಬ್ಬರು ಯಾವುದೇ ಜಾತಿ, ಮತ ಬೇಧವಿಲ್ಲದೇ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಿ ಮತ ಚಲಾಯಿಸಬೇಕು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್ ಮಾತನಾಡಿ, ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಯುವ ಜನತೆಯಲ್ಲಿ ಮತದಾನ ಜಾಗೃತಿಗಾಗಿ ಎಲ್ಲಾ ಕಾಲೇಜುಗಳಲ್ಲಿ ಪ್ರಬಂದ ಸ್ಪರ್ಧೆ, ಭಾಷಣ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿದೆ. ಪ್ರತಿ ಕಾಲೇಜುಗಳಲ್ಲಿ ಮತದಾರರಜಾಗೃತ ಕ್ಲಬ್‌ಗಳನ್ನು ಪ್ರಾರಂಭಿಸಲಾಗಿದೆ. ಕ್ಯಾಂಪಸ್ ಅಂಬಾಸಿಡರ್ ಗಳನ್ನು ನೇಮಿಸಲಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆ ಯಲ್ಲಿ ಅತಿ ಹೆಚ್ಚಿನ ಮತದಾನ ನಡೆಯುವಂತೆ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಜಿಲ್ಲೆಯಲ್ಲಿ 2019ರ ಜ.1ಕ್ಕೆ 18 ವರ್ಷ ತುಂಬಿದ ಯುವ ಮತದಾರರ ನೊಂದಣಿಗಾಗಿ, ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅಗತ್ಯವಿರುವ ನಮೂನೆ 6ನ್ನು ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಂಶುಪಾಲರಿಂದ ಅರ್ಜಿ ಪಡೆದು, ಭರ್ತಿ ಮಾಡಿ ಅವರಿಗೆ ಸಲ್ಲಿಸಬೇಕು.ಪ್ರಾಂಶುಪಾಲರು ಆ ಅರ್ಜಿಗಳನ್ನು ಸಂಬಂದಪಟ್ಟ ತಹಶೀಲ್ದಾರ್ ಕಚೇರಿಗೆ ಸಲ್ಲಿಸುತ್ತಾರೆ. ಫೆ.14ರವರೆಗೆ ಹೀಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಪ್ರತಿ ಕಾಲೇಜಿನಲ್ಲಿ ವೋಟರ್ ಹೆಲ್ಪ್‌ಡೆಸ್ಕ್ ತೆರೆಯಲಾಗಿದೆ. ಯಾವ ಕಾಲೇಜಿನಲ್ಲಿ ಅತೀ ಹೆಚ್ಚು ಯುವ ಮತದಾರರ ಹೆಸರು ನೊಂದಣಿ ಯಾಗುವುದೊ ಅಂತಹ ಕಾಲೇಜುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು.
ಎಎಸ್‌ಪಿ ಕುಮಾರ್‌ಚಂದ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾನದ ಜಾಗೃತಿ ಸಲುವಾಗಿ ಶಾಲಾ, ಕಾಲೇಜುಗಳಲ್ಲಿ ಆಯೋಜಿಸಲಾಗಿದ್ದ ಪ್ರಬಂಧ, ರಸಪ್ರಶ್ನೆ, ಕೊಲಾಜ್, ಚಿತ್ರಕಲೆ, ಪೋಸ್ಟರ್ ಮೇಕಿಂಗ್ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬೂತ್ ಮಟ್ಟದ ಅಧಿಕಾರಿಗಳಿಗೆ ಆಯೋಜಿ ಸಿದ ಸ್ಪರ್ಧೆಯ ವಿಜೇತ ಅಧಿಕಾರಿಗಳಿಗೆ, ಇಎಲ್‌ಸಿ, ಕ್ಯಾಂಪಸ್ ಅಂಬಾಸಿಡರ್ ಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹೊಸದಾಗಿ ಮತದಾರರ ಪಟ್ಟಿಯಲ್ಲಿ ನೊಂದಣಿಯಾದ ಯುವ ಮತದಾರ ರಿಗೆ ಎಪಿಕ್ ಕಾರ್ಡ್ ವಿತರಿಸಲಾಯಿತು. ಕೋಲಾರದಲ್ಲಿ ಚುನಾವಣಾಧಿಕಾರಿ ಯಾಗಿದ್ದಾಗ ಮಾಡಿದ ಕೆಲಸಕ್ಕೆ ಪ್ರಶಸ್ತಿ ಪಡೆದ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರನ್ನು ಸನ್ಮಾನಿಸಲಾಯಿತು. ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸ್ವಾಗತಿಸಿದರು.







