ಮೀನುಗಾರರ ನಾಪತ್ತೆ: ಮುಖಂಡರಿಂದ ಸಿಎಂ ಭೇಟಿ

ಉಡುಪಿ, ಜ.25: ಬೋಟು ಸಹಿತ ಮೀನುಗಾರುರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಮೀನುಗಾರ ಮುಖಂಡರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಬೇಟಿ ಮಾಡಿ ಮಾತುಕತೆ ನಡೆಸಿದರು.
ರಾಜ್ಯ ಬಜೆಟ್‌ನ ಪೂರ್ವಭಾವಿಯಾಗಿ ಮೀನುಗಾರಿಕಾ ಸಮಸ್ಯೆ ಮತ್ತು ಬೇಡಿಕೆ ಕುರಿತು ಬೆಂಗಳೂರಿನಲ್ಲಿ ಕರೆಯಲಾದ ವಿಶೇಷ ಸಭೆಯ ಬಳಿಕ ಮಲ್ಪೆ ಮೀನುಗಾರರ ಮುಖಂಡರು ಮುಖ್ಯಮಂತ್ರಿಯನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಈ ಕುರಿತು ಚರ್ಚಿಸಿದರು.
ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ, ನಾಪತ್ತೆಯಾದವರ ಪತ್ತೆಗಾಗಿ ಸರಕಾರ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಇದನ್ನು ಗಂಭೀರವಾಗಿ ಪರಿ ಗಣಿಸಲಾಗಿದ್ದು, ಸರಕಾರ ಮೀನುಗಾರ ಜೊತೆ ಇರುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಕಾರ್ಯದರ್ಶಿ ಗೋಪಾಲ್ ಆರ್.ಕೆ., ಮಂಗಳೂರು ಟ್ರೋಲ್‌ಬೋಟ್ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪುತ್ರನ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.





