ಜ. 29ಕ್ಕೆ ನೂತನ 2.5 ಲಕ್ಷ ಲೀ.ಸಾಮರ್ಥ್ಯದ ಉಡುಪಿ ಡೈರಿ ಉದ್ಘಾಟನೆ
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ

ಉಡುಪಿ, ಜ.25: ರಾಜ್ಯದ 14 ಒಕ್ಕೂಟಗಳಲ್ಲಿ ನಂ.1 ಸ್ಥಾನದಲ್ಲಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಇಲ್ಲಿಗೆ ಸಮೀಪದ ಉಪ್ಪೂರಿನಲ್ಲಿ ಸುಮಾರು 90 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ 2.5 ಲಕ್ಷ ಲೀ. ಸಾಮರ್ಥ್ಯದ ನೂತನ ಉಡುಪಿ ಡೈರಿ ಜ.29ರಂದು ಉದ್ಘಾಟನೆಗೊಳ್ಳಲಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದ್ದಾರೆ.
ಒಕ್ಕೂಟ ಉಪ್ಪೂರಿನ ಆರು ಎಕರೆ ಜಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗ ಳೊಂದಿಗೆ ನಿರ್ಮಾಣಗೊಳ್ಳುತ್ತಿರುವ ಸ್ವಯಂಚಾಲಿತ ಸಂಸ್ಕರಣಾ ವ್ಯವಸ್ಥೆಯ ನ್ನೊಳಗೊಂಡ ಡೈರಿಯೊಳಗೆ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
2017ರ ಎ.16ರಂದು ಶಂಕುಸ್ಥಾಪನೆಗೊಂಡ ಈ ಕಾಮಗಾರಿಯನ್ನು ಎರಡು ವರ್ಷದೊಳಗೆ ಮುಗಿಸಲಾಗಿದೆ. ಇದನ್ನು ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಲಿಯಿಂದ ಟರ್ನ್ ಕೀ ಕಾಮಗಾರಿಯಲ್ಲಿ ನಿರ್ಮಿಸಲಾಗಿದೆ. ಈ ಡೈರಿ ಯೋಜನೆಗೆ ನಬಾರ್ಡ್‌ನ ಡೈರಿ ಸಂಸ್ಕರಣೆ ಸೌಕರ್ಯ ಅಭಿವೃದ್ಧಿ ನಿಧಿಯಿಂದ 65 ಕೋಟಿ ರೂ.ಸಾಲವನ್ನು ಪಡೆಯಲಾಗಿದೆ. ಉಳಿದ ಮೊತ್ತವನ್ನು ಒಕ್ಕೂಟದ ಸೌಕರ್ಯ ಅಭಿವೃದ್ಧಿ ನಿಧಿಯಿಂದ ಭರಿಸಲಾಗಿದೆ ಎಂದು ರವಿರಾಜ ಹೆಗ್ಡೆ ತಿಳಿಸಿದರು.
ಈ ನೂತನ ಡೈರಿಯಲ್ಲಿ ಪ್ರತಿದಿನ ಎರಡು ಲಕ್ಷ ಲೀ.ಹಾಲು ಸಂಸ್ಕರಣೆ, 50 ಸಾವಿರ ಕೆ.ಜಿ.ಮೊಸರು, ಲಸ್ಸಿ, ಮಜ್ಜಿಗೆ ತಯಾರಿಯಾಗಿ ಪ್ಯಾಂಕಿಂಗ್ ನಡೆಯಲಿದೆ. ಅಲ್ಲದೇ ಎರಡು ಟನ್ ತುಪ್ಪ ಹಾಗೂ ಇತರ ಉತ್ಪನ್ನಗಳ ತಯಾರಿಕೆಗೂ ಅವಕಾಶವಿದೆ. ಈ ಡೈರಿಯ ಸ್ಥಾಪನೆಯಿಂದ ಪ್ರಸ್ತುತ ಮಂಗಳೂರು ಡೈರಿಯಲ್ಲಿ ತಯಾರಿಗೊಂಡು ಸರಬರಾಜಾಗುತ್ತಿರುವ ಮೊಸರು, ತುಪ್ಪ, ಲಸ್ಸಿ, ಮಜ್ಜಿಗೆ ಮುಂತಾದ ಉತ್ಪನ್ನಗಳನ್ನು ಇನ್ನು ಮುಂದೆ ಉಡುಪಿ ಡೈರಿಯಲ್ಲಿ ತಯಾರಾಗಿ ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ ಎಂದರು.
ಪರಿಸರ ಸಂರಕ್ಷಣೆಯ ಉದ್ದೇಶದಿಂದ ಕೇಂದ್ರೀಕೃತ ಸೌರವಿದ್ಯುತ್ ವ್ಯವಸ್ಥೆಯಲ್ಲಿ ಈ ಸ್ಥಾವರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದರಿಂದ ಘಟಕಕ್ಕೆ ಅಗತ್ಯವಿರುವ ಕ್ರೇಟು, ಯಂತ್ರೋಪಕರಣ, ಟ್ಯಾಂಕರ್‌ಗಳನ್ನು ತೊಳೆಯಲು ಬಿಸಿನೀರು ಹಾಗೂ ಹಬೆಯಂತ್ರದಲ್ಲಿ ವಿದ್ಯುತ್‌ನ ಉಳಿಕೆಗೆ ಇದನ್ನು ಬಳಸ ಲಾಗುವುದು ಎಂದರು.
ಅಮೂಲ್‌ನಿಂದ ಸ್ಪೂರ್ತಿ ಪಡೆದು ಜಿಲ್ಲೆಯಲ್ಲಿ ಹೈನುಗಾರಿಕೆಗೆ ಹಾಗೂ ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡಲು 1974ರಲ್ಲಿ ಮಣಿಪಾಲದ ಟಿ.ಎ.ಪೈ ಅವರಿಂದ ಕೆನರಾ ಹಾಲು ಒಕ್ಕೂಟ ಮಣಿಪಾಲದಲ್ಲಿ ಸ್ಥಾಪನೆಗೊಂಡ ಈ ಒಕ್ಕೂಟ, 1986ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಲ್ಲಿ ವಿಲೀನಗೊಂಡಿತು. ಹೀಗಾಗಿ ಒಕ್ಕೂಟ ಈಗ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿದೆ ಎಂದವರು ಹೇಳಿದರು.
ಪ್ರಸ್ತುತ ಒಕ್ಕೂಟದಲ್ಲಿ 720 ಹಾಲು ಉತ್ಪಾದಕರ ಸಂಘಗಳು ಕಾರ್ಯನಿರ್ವ ಹಿಸುತ್ತಿವೆ. ಇವುಗಳಲ್ಲಿ 198 ಮಹಿಳಾ ಸಂಘಗಳಾಗಿವೆ. ಇವುಗಳಲ್ಲಿ ಒಟ್ಟು 1,39,442 ಸದಸ್ಯರು ನೊಂದಾವಣೆಗೊಂಡಿದ್ದಾರೆ. ಪ್ರಾರಂಭದಲ್ಲಿ ಕೇವಲ 4500 ಲೀ. ಹಾಲನ್ನು ಮಾತ್ರ ಸಂಗ್ರಹಿಸುತಿದ್ದ ಒಕ್ಕೂಟ, ಈಗ ಪ್ರತಿದಿನ ಸರಾಸರಿ 4.5ಲಕ್ಷ ಕೆ.ಜಿ.ಹಾಲನ್ನು ಸಂಗ್ರಹಿಸುತ್ತಿದೆ. ಹಾಲು ಮಾರಾಟ ಪ್ರತಿದಿನ 3.5ಲಕ್ಷ ಕೆ.ಜಿ. ದಾಟಿದೆ. ಕಳೆದ ಜೂನ್‌ನಲ್ಲಿ ಒಕ್ಕೂಟ 4.8ಲಕ್ಷ ಕೆ.ಜಿ.ಹಾಲು ಸಂಗ್ರಹಿಸಿ ದಾಖಲೆ ಮಾಡಿದೆ ಎಂದು ಹೆಗ್ಡೆ ತಿಳಿಸಿದರು.
ಒಕ್ಕೂಟ ರೈತರ ಹಾಲಿಗೆ ಅತ್ಯಧಿಕ ದರವನ್ನು ನೀಡುತ್ತಿದೆ. ಹಾಲಿನ ಗುಣಮಟ್ಟ ವನ್ನು ಆಧರಿಸಿ ಪ್ರತಿ ಲೀ. ಹಾಲಿಗೆ 28.60ರೂ.ನಿಂದ 30.64ರೂ. ರೈತನಿಗೆ ಸಿಗುತ್ತಿದೆ. ಇದರೊಂದಿಗೆ ಸರಕಾರ ನೀಡುವ ಲೀ.ತಲಾ ಐದು ರೂ. ಪ್ರೋತ್ಸಾಹ ಧನ ಪ್ರತ್ಯೇಕವಾಗಿ ಸಿಗುತ್ತಿದೆ. ಒಕ್ಕೂಟದಲ್ಲಿ ಈಗ ತಿಂಗಳಿಗೆ 108 ಟನ್ ತುಪ್ಪ, 37 ಟನ್ ಕ್ರೀಂ, 7 ಟನ್ ಮೈಸೂರು ಪಾಕ್, 8 ಟನ್ ಪೇಡಾ, 40 ಟನ್ ಪನ್ನೀರ್, 5 ಟನ್ ನಂದಿನಿ ಬೈಟ್ ಮಾರಾಟವಾಗುತ್ತಿದೆ.
ತನ್ನ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಒಕ್ಕೂಟ ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ದ.ಕ. ಒಕ್ಕೂಟ ಪಡೆದಿದೆ. 2015-16ನೇ ಸಾಲಿನಲ್ಲಿ ದೇಶದ 220 ಒಕ್ಕೂಟಗಳಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಎರಡನೇ ಅತ್ಯುತ್ತಮ ಒಕ್ಕೂಟವಾಗಿ ಪ್ರಶಸ್ತಿ ಗಳಿಸಿದೆ. ಮುಂದೆ ಒಕ್ಕೂಟದಿಂದ ಐಸ್‌ಕ್ರೀಂ ಘಟಕ ಸ್ಥಾಪನೆಗೆ ಪ್ರಯತ್ನಗಳು ಸಾಗಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಕಾಪು ದಿವಾಕರ ಶೆಟ್ಟಿ, ಟಿ.ಸೂರ್ಯ ಶೆಟ್ಟಿ, ನವೀನ್‌ಚಂದ್ರ ಜೈನ್, ಹದ್ದೂರು ರಾಜೀವ ಶೆಟ್ಟಿ, ಜಾನಕಿ ಹಂದೆ, ಅಶೋಕ್‌ಕುಮಾರ ಶೆಟ್ಟಿ, ಉದಯ ಎಸ್.ಕೋಟ್ಯಾನ್, ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ವಿ.ಸತ್ಯನಾರಾಯಣ, ಇಂಜಿನಿಯರ್ ಜಿ.ಎ. ರಾಯ್ಕರ್, ಮಣಿಪಾಲ ಘಟಕದ ಲಕ್ಕಪ್ಪ, ನಿತ್ಯಾನಂದ ಭಟ್, ಶಿವಶಂಕರ್ ಸ್ವಾಮಿ, ಜಯದೇವ್ ಮುಂತಾದವರಿದ್ದರು.
ರಾಜ್ಯದ ಮುಖ್ಯಮಂತ್ರಿಗಳಿಂದ ಉದ್ಘಾಟನೆ
ಉಪ್ಪೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಡುಪಿ ಡೈರಿಯನ್ನು ಜ.29ರ ಬೆಳಗ್ಗೆ 10:30ಕ್ಕೆ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಹಾಲು ಸಂಸ್ಕರಣಾ ಘಟಕವನ್ನು ರಾಜ್ಯ ಲೋಕೋಪಯೋಗಿ ಸಚಿವ ಹಾಗೂ ಕಹಾಮದ ನಿರ್ದೇಶಕ ಎಚ್.ಡಿ.ರೇವಣ್ಣ ಉದ್ಘಾಟಿಸಲಿದ್ದಾರೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹಾಲು ಪ್ಯಾಂಕಿಂಗ್ ಘಟಕ ಉದ್ಘಾಟಿಸಿದರೆ, ರಾಜ್ಯ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಪ್ರಯೋಗಾಲಯ ಉದ್ಘಾಟಿಸುವರು. ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ರೆಫ್ರಿಜರೇಷನ್ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಉತ್ಪನ್ನ ಘಟಕವನ್ನು ಉದ್ಘಾಟಿಸುವರು.
ಶೀತಲೀಕರಣ ಕೊಠಡಿಯನ್ನು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ತ್ಯಾಜ್ಯ ಸಂಸ್ಕರಣ ಘಟಕವನ್ನು ವಿಧಾನಪರಿಷತ್‌ನಲ್ಲಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು. ಸಂಸದೆ ಶೋಭಾ ಕರಂದ್ಲಾಜೆ ಉಗ್ರಾಣವನ್ನೂ, ನಳಿನ್‌ಕುಮಾರ್ ಕಟೀಲ್ ನಂದಿನಿ ಪಾರ್ಲರ್ ಅನ್ನು ಉದ್ಘಾಟಿಸುವರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.







