15 ತಿಂಗಳಲ್ಲಿ 18 ಮಿಲಿಯನ್ ಉದ್ಯೋಗ ಸೃಷ್ಟಿ: ಸಿಎಸ್ಒ ವರದಿ
![15 ತಿಂಗಳಲ್ಲಿ 18 ಮಿಲಿಯನ್ ಉದ್ಯೋಗ ಸೃಷ್ಟಿ: ಸಿಎಸ್ಒ ವರದಿ 15 ತಿಂಗಳಲ್ಲಿ 18 ಮಿಲಿಯನ್ ಉದ್ಯೋಗ ಸೃಷ್ಟಿ: ಸಿಎಸ್ಒ ವರದಿ](https://www.varthabharati.in/sites/default/files/images/articles/2019/01/25/174643.jpg)
ಹೊಸದಿಲ್ಲಿ,ಜ.25: ದೇಶದ ಔಪಚಾರಿಕ ವಲಯದಿಂದ 2017ರ ಸೆಪ್ಟಂಬರ್ನಿಂದ 2018ರ ನವೆಂಬರ್ವರೆಗೆ ಹದಿನೈದು ತಿಂಗಳ ಅವಧಿಯಲ್ಲಿ 18 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ, ಪಿಎಫ್ಆರ್ಡಿಎ ಮತ್ತು ರಾಜ್ಯ ಕಾರ್ಮಿಕರ ವಿಮಾ ನಿಗಮ (ಇಎಸ್ಐಸಿ)ಯ ಪಾವತಿ ದತ್ತಾಂಶದ ಆಧಾರದಲ್ಲಿ ನಡೆಸಲಾದ ಅಧ್ಯಯನ ತಿಳಿಸಿದೆ. ಈ ಹದಿನೈದು ತಿಂಗಳಲ್ಲಿ 1,84,38,748 ಮಂದಿ ಇಎಸ್ಐಯ ಹೊಸ ಸದಸ್ಯರಾಗಿದ್ದಾರೆ ಎಂದು ಸಮಾಜದ ವಿವಿಧ ಭದ್ರತಾ ಯೋಜನೆಗಳ ಪಾವತಿ ಅಂಕಿಅಂಶಗಳ ಆಧಾರದಲ್ಲಿ ಕೇಂದ್ರ ಅಂಕಿಅಂಶಗಳ ಕಚೇರಿ (ಸಿಎಸ್ಒ) ನಡೆಸಿದ ಅಧ್ಯಯನ ತಿಳಿಸಿದೆ. ಕಾರ್ಮಿಕರ ಪಿಂಚಣಿ ನಿಧಿ ಸಂಸ್ಥೆ ಇಪಿಎಫ್ಒ ನಿರ್ವಹಿಸುವ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸೆಪ್ಟಂಬರ್ 2017ರಿಂದ ನವೆಂಬರ್ 2018ರ ವರೆಗೆ 1,79,34,300 ಹೊಸ ಸದಸ್ಯರು ಸೇರಿದ್ದಾರೆ ಎಂದು ಶುಕ್ರವಾರ ಬಿಡುಗಡೆಯಾದ ವರದಿಯಲ್ಲಿ ತಿಳಿಸಲಾಗಿದೆ. 2018ರ ನವೆಂಬರ್ನಲ್ಲಿ 10, 31,484 ಮಂದಿ ಹೊಸದಾಗಿ ಇಎಸ್ಐ ಯೋಜನೆಗೆ ಸೇರ್ಪಡೆಗೊಂಡಿದ್ದಾರೆ. ಆದರೆ ಈ ಸಂಖ್ಯೆ 2017ರ ನವೆಂಬರ್ ತಿಂಗಳಲ್ಲಿ ಸೇರ್ಪಡೆಯಾದ ಹೊಸ 11,84,042 ಸದಸ್ಯರಿಗಿಂತ ಶೇ.12.88 ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
ಈ ಹದಿನೈದು ತಿಂಗಳ ಅವಧಿಯಲ್ಲಿ 2018ರ ಜುಲೈಯಲ್ಲಿ ಅತೀಹೆಚ್ಚು ಅಂದರೆ 14,68,880 ಹೊಸ ಸದಸ್ಯರು ಇಎಸ್ಐ ಯೋಜನೆಗೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.