ಹೆಜಮಾಡಿ ಸರ್ವಕಾಲಿಕ ಕ್ರೀಡಾಂಗಣ: ಲಾಲಾಜಿ ಮೆಂಡನ್

ಪಡುಬಿದ್ರಿ, ಜ. 25: ಹೆಜಮಾಡಿಯ ಕ್ರೀಡಾಂಗಣವನ್ನು ಸಾರ್ವಕಾಲಿಕ ಕ್ರೀಡಾಂಗಣವನ್ನಾಗಿಸಲು ಕಾರ್ಯಸೂಚಿ ಹಮ್ಮಿಕೊಳ್ಳಲಾಗಿದ್ದು, ಇದರಿಂದ ಕ್ರೀಡಾಳುಗಳಿಗೆ ಸಹಾಯವಾಗಲಿದೆ ಎಂದು ಶಾಸಕ ಲಾಲಾಜಿ ಮೆಂಡನ್ ಹೇಳಿದರು.
ಹೆಜಮಾಡಿ ಬಸ್ತಿಪಡ್ಪು ಕ್ರೀಡಾಂಗಣದಲ್ಲಿ ಹೆಜಮಾಡಿಯ ದುರ್ಗಾ ಫ್ರೆಂಡ್ಸ್ ಆಶ್ರಯದಲ್ಲಿ ಶುಕ್ರವಾರ ಆರಂಭಗೊಂಡ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ದುರ್ಗಾ ಪ್ರೀಮಿಯರ್ ಲೀಗ್ 2ಕೆ 19ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಚುಟುಕು ಕ್ರಿಕೆಟ್ ಪಂದ್ಯಾಟಗಳು ಜನಪ್ರಿಯವಾಗುತ್ತಿದೆ. ಇದರಿಂದ ಕ್ರಿಕೆಟ್ ಪ್ರತಿಭೆಗಳಿಗೆ ಸಮಸ್ಯೆ ಆಗುತ್ತದೆ. ಅದರ ಬದಲು ನೈಜ ಕ್ರಿಕೆಟ್‍ಗೆ ಹೆಚ್ಚು ತ್ತು ನೀಡಬೇಕು. ಈ ಮೂಲಕ ಎಳೆಯರು ಪ್ರವರ್ಧಮಾನಕ್ಕೆ ಬರಲು ಸಾಧ್ಯವಿದೆ.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಮಾತನಾಡಿ, ಹೆಜಮಾಡಿ ಕ್ರೀಡಾಂಗಣದಲ್ಲಿ ಮತ್ತೊಂದು ಪೆವಿಲಿಯನ್ ನಿರ್ಮಿಸಲು ಮತ್ತು ಹೆಜಮಾಡಿಯ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ತನ್ನ ವತಿಯಿಂದ 5 ಲಕ್ಷ ರೂ.ನೀಡುವುದಾಗಿ ಘೋಷಿಸಿದರು.
ಉಡುಪಿ ಜಿಲ್ಲಾ ಟೆನ್ನಿಸ್‍ಬಾಲ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಶರತ್ ಶೆಟ್ಟಿ, ಉದ್ಯಮಿ ಸೂರಜ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಪಠೇಲರ ಮನೆ ಶಂಕರ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಪಠೇಲರ ಮನೆ ಚಂದ್ರಹಾಸ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ರೇಣುಕಾ ಪುತ್ರನ್, ಪಠೇಲರ ಮನೆ ಪುಷ್ಪರಾಜ್ ಶೆಟ್ಟಿ, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಪಾಂಡುರಂಗ ಕರ್ಕೇರ, ಕಾಂಗ್ರೆಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಸುಧೀರ್ ಕರ್ಕೇರ, ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಎಚ್.ರವಿ ಕುಂದರ್ ಮುಖ್ಯ ಅತಿಥಿಗಳಾಗಿದ್ದರು.
ಹೆಜಮಾಡಿ ಗ್ರಾಮ ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ ಪ್ರಸ್ತಾವಿಸಿದರು. ವಿನಯಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಪಂದ್ಯಾಟದಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿದ್ದು,ಎರಡು ವಿಭಾಗಗಳಾಗಿ ಲೀಗ್ ಮಾದರಿಯಲ್ಲಿ ಮೂರು ದಿನಗಳ ಕಾಲ ಆಟವಾಡಲಿದೆ.







