ಕಲಬುರ್ಗಿ ಹತ್ಯೆ ಪ್ರಕರಣ ಗಂಭೀರ ವಿಷಯ, ನಾವು ವಿಚಾರಣೆ ನಡೆಸುತ್ತೇವೆ : ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಜ. 25: ತನ್ನ ಪತಿಯ ಹತ್ಯೆ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕೆ ವಹಿಸುವಂತೆ ವಿಚಾರವಾದಿ ಎಂ.ಎಂ. ಕುಲಬುರ್ಗಿ ಅವರ ಪತ್ನಿಯ ಕೋರಿಕೆಗೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ನೇತೃತ್ವದ ಪೀಠ, ‘‘ಇದು ತುಂಬಾ ಗಂಭೀರ ವಿಷಯ. ನಾವು ಇದರ ವಿಚಾರಣೆ ನಡೆಸಲಿದ್ದೇವೆ. ಪ್ರಕರಣವನ್ನು ಮುಂದೂಡುವುದಿಲ್ಲ. ನಿಮ್ಮ ಮನವಿ ಸಿದ್ಧಪಡಿಸಿ’’ ಎಂದಿದೆ. ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಫೆಬ್ರವರಿ 26ಕ್ಕೆ ನಿಗದಿಪಡಿಸಿದೆ. ನನ್ನ ಪತಿ ಹತ್ಯೆ ಪ್ರಕರಣ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್, ವಿಚಾರವಾದಿ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದ ನಡುವೆ ನಂಟು ಇದೆ ಎಂದು ಪ್ರೊಫೆಸರ್ ಕಲುಬುರ್ಗಿ ಅವರ ಪತ್ನಿ ಉಮಾ ದೇವಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಪತಿಯ ಹತ್ಯೆ ಪ್ರಕರಣವನ್ನು ಸ್ವತಂತ್ರ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.
ಕಳೆದ ವಿಚಾರಣೆಯಲ್ಲಿ ಕಲುಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುವ ಬದಲು ಕಾಲಹರಣ ಮಾಡುತ್ತಿರುವ ಕರ್ನಾಟಕ ಸರಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಕಲುಬುರ್ಗಿ, ಗೌರಿ ಲಂಕೇಶ್, ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ ಪಾನ್ಸರೆ ಅವರ ಹತ್ಯೆ ಕುರಿತು ತನಿಖೆ ನಡೆಸಿ. ಆಗ ಇವುಗಳ ನಡುವಿನ ನಂಟು ತಿಳಿಯಬಹುದು ಎಂದು ಸುಪ್ರೀಂ ಕೋರ್ಟ್ ಸಿಬಿಐಗೆ ಸೂಚಿಸಿತ್ತು. ಗೌರಿ ಲಂಕೇಶ್ ಹಾಗೂ ಕಲುಬುರ್ಗಿ ಅವರನ್ನು ಹತ್ಯೆಗೈದಿರುವುದು ಒಂದೇ ಗನ್‌ನಿಂದ ಎಂದು ಕರ್ನಾಟಕ ವಿಧಿವಿಜ್ಞಾನ ಪ್ರಯೋಗಾಲಯ ದೃಢಪಡಿಸಿತ್ತು. ಈ ಎರಡು ಹತ್ಯೆಗಳ ನಡುವಿನ ನಂಟಿನ ಬಗೆಗಿನ ಮೊದಲ ಅಧೀಕೃತ ದೃಢೀಕರಣ ಇದು. ಕಲುಬುರ್ಗಿ (77) ಅವರ ಹತ್ಯೆ 2015 ಆಗಸ್ಟ್ 30ರಂದು ಧಾರವಾಡದಲ್ಲಿ ನಡೆದಿದ್ದರೆ, ಗೌರಿ ಲಂಕೇಶ್ (55)ಅವರ ಹತ್ಯೆ ಬೆಂಗಳೂರಿನಲ್ಲಿ 2017 ಸೆಪ್ಟಂಬರ್ 5ರಂದು ಸಂಭವಿಸಿತ್ತು.