ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತೀರಾ ? ಅಡ್ವಾಣಿ, ಜೋಷಿಗೆ ಬಿಜೆಪಿ ಪ್ರಶ್ನೆ

ಹೊಸದಿಲ್ಲಿ, ಜ.25: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತೀರಾ ಎಂದು ಪಕ್ಷದ ಹಿರಿಯ ಮುಖಂಡರಾದ ಎಲ್‌ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿಗೆ ಬಿಜೆಪಿ ಮುಖಂಡರು ಪ್ರಶ್ನಿಸಿದ್ದು ಈ ಬಗ್ಗೆ ನೀವೇ ನಿರ್ಧರಿಸಬೇಕು ಎಂದು ತಿಳಿಸಿದೆ. ಇನ್ನಿಬ್ಬರು ಹಿರಿಯ ಮುಖಂಡರಾದ ಸುಷ್ಮಾ ಸ್ವರಾಜ್ ಮತ್ತು ಉಮಾ ಭಾರತಿ ಈಗಾಗಲೇ ಚುನಾವಣೆಯಿಂದ ಹೊರಗುಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದಲ್ಲಿ 75 ವರ್ಷ ಮೇಲ್ಪಟ್ಟವರು ಸಚಿವರಾಗಲು ಮಾತ್ರ ನಿಷೇಧವಿದೆ. ಆದರೆ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಸ್ಪಷ್ಟ ಪಡಿಸಲಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಅಡ್ವಾಣಿ (ಈಗ 91 ವರ್ಷ) ಹಾಗೂ ಉತ್ತರಪ್ರದೇಶದ ಕಾನ್ಪುರ ಕ್ಷೇತ್ರದಿಂದ ಗೆದ್ದಿದ್ದ ಜೋಷಿ(ಈಗ 84 ವರ್ಷ) ಯವರನ್ನು ಮಾರ್ಗದರ್ಶಕರನ್ನಾಗಿ ನೇಮಿಸಿ ಬದಿಗೆ ಸರಿಸಲಾಗಿದೆ.
2014ರಲ್ಲಿ ಚುನಾವಣೆಯಲ್ಲಿ ಗೆದ್ದಿದ್ದ ಹಿರಿಯರಾದ ಅಡ್ವಾಣಿ, ಜೋಷಿ, ಶಾಂತ ಕುಮಾರ್ ಮತ್ತು ಬಿಸಿ ಖಂಡೂರಿಯವರನ್ನು ಮೋದಿ ಸರಕಾರದಿಂದ ಹೊರಗಿಡಲಾಗಿತ್ತು. ಮಾಜಿ ಪ್ರಧಾನಿ ವಾಜಪೇಯಿಯವರ ಜೊತೆ ಅಡ್ವಾಣಿ ಹಾಗೂ ಜೋಷಿಯವರನ್ನು ‘ಮಾರ್ಗದರ್ಶಕ ಮಂಡಳಿ’ಯ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಈ ಸಮಿತಿ ಒಮ್ಮೆ ಕೂಡಾ ಸಭೆ ಸೇರಿಲ್ಲ. ಲೋಕಸಭೆಯ ಸ್ಪೀಕರ್ ಹುದ್ದೆಯ ಬಗ್ಗೆ ಅಡ್ವಾಣಿ ಆಸಕ್ತಿ ಹೊಂದಿದ್ದರು ಎನ್ನಲಾಗಿದೆ . ಆದರೆ ಈ ಹುದ್ದೆ ಸುಮಿತ್ರಾ ಮಹಾಜನ್ ಪಾಲಾಗಿದೆ. ಸಂಸತ್ತಿನ ಅಂದಾಜು ಸಮಿತಿಯ ಅಧ್ಯಕ್ಷರಾಗಿರುವ ಜೋಷಿ ಕಳೆದ ಕೆಲ ತಿಂಗಳಿನಿಂದ ಸರಕಾರದ ಕಾರ್ಯನೀತಿಯನ್ನು ಪ್ರಶ್ನಿಸಲು ಆರಂಭಿಸಿರುವುದು ಪಕ್ಷದ ಮುಖಂಡರಿಗೆ ಇರಿಸು ಮುರಿಸು ಉಂಟುಮಾಡಿದೆ ಎನ್ನಲಾಗಿದೆ. ತಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಅಸಮಾಧಾನ ಗೊಂಡಿದ್ದ ಹಿರಿಯರಾದ ಅಡ್ವಾಣಿ, ಜೋಷಿ ಮತ್ತು ಯಶವಂತ್ ಸಿನ್ಹಾ (ಕಳೆದ ವರ್ಷ ಬಿಜೆಪಿ ತ್ಯಜಿಸಿದ್ದಾರೆ) ಬಿಹಾರ ಚುನಾವಣೆಯಲ್ಲಿ ಪಕ್ಷಕ್ಕಾದ ಸೋಲಿನ ಬಳಿಕ ಪಕ್ಷದ ನಾಯಕತ್ವದ ಬಗ್ಗೆ ಪ್ರಶ್ನಿಸಿ ಪತ್ರ ಬರೆದಿದ್ದರು.
ಇದೀಗ ಉತ್ತರಪ್ರದೇಶದಲ್ಲಿ ತನ್ನ ಬೇರುಗಳನ್ನು ಭದ್ರಗೊಳಿಸುವ ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿಯನ್ನು ಮುನ್ನೆಲೆಗೆ ತಂದಿದ್ದು ಇದಕ್ಕೆ ಸೂಕ್ತ ಇದಿರೇಟು ನೀಡಬೇಕಾದರೆ ಜೋಷಿ ಮತ್ತು ಕಲ್‌ರಾಜ್ ಮಿಶ್ರಾರಂತಹ ಮುಖಂಡರನ್ನಾದರೂ ಬಿಜೆಪಿ ಮತ್ತೆ ಮುಂಚೂಣಿಗೆ ತರುವ ಅಗತ್ಯವಿದೆ ಎಂಬ ವಾದ ಕೇಳಿಬರುತ್ತಿದೆ. ಏಕೆಂದರೆ ಮೇಲ್ವರ್ಗದ ಮತದಾರರು ಬಿಜೆಪಿಯ ಬಗ್ಗೆ ಭ್ರಮನಿರಸನಗೊಂಡು ಕಾಂಗ್ರೆಸ್‌ನತ್ತ ವಾಲುತ್ತಿರುವ ಈ ಸಂದರ್ಭದಲ್ಲಿ ಮೇಲ್ವರ್ಗದ ಪ್ರತಿನಿಧಿಗಳಾಗಿರುವ ಜೋಷಿ ಮತ್ತು ಮಿಶ್ರಾರನ್ನು ಬದಿಗೆ ಸರಿಸಿದರೆ ಬಿಜೆಪಿಗೆ ಅಪಾರ ಹಾನಿಯಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.







