ಸಮಂತಾ, ಝಾಂಗ್‌ಗೆ ಮಹಿಳಾ ಡಬಲ್ಸ್ ಪ್ರಶಸ್ತಿ
ಆಸ್ಟ್ರೇಲಿಯನ್ ಓಪನ್

ಮೆಲ್ಬೋರ್ನ್, ಜ.25: ಶ್ರೇಯಾಂಕರಹಿತ ಸಮಂತಾ ಸ್ಟೋಸರ್ ಹಾಗೂ ಝಾಂಗ್ ಶುಐ ಆಸ್ಟ್ರೇಲಿಯನ್ ಓಪನ್‌ನ ಮಹಿಳಾ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಮೆಲ್ಬೋರ್ನ್ ಪಾರ್ಕ್‌ನ ರಾಡ್ ಲಾವೆರ್ ಅರೆನಾದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ-ಚೀನಾದ ಜೋಡಿ ಸಮಂತಾ-ಝಾಂಗ್ ಕಳೆದ ವರ್ಷದ ಚಾಂಪಿಯನ್,ಹಂಗೇರಿ-ಫ್ರಾನ್ಸ್‌ನ ಟಿಮಿಯಾ ಬಾಬೊಸ್ ಹಾಗೂ ಕ್ರಿಸ್ಟಿನಾ ಮ್ಲಾಡೆನೊವಿಕ್‌ರನ್ನು 6-3, 6-4 ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿಗೆ ಮುತ್ತಿಟ್ಟರು.
‘‘ಇಂದು ನನ್ನ ಕನಸು ಈಡೇರಿತು’’ ಎಂದು ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಝಾಂಗ್ ಪ್ರತಿಕ್ರಿಯೆ ನೀಡಿದರು. ಸಮಂತಾ-ಝಾಂಗ್ ಜೋಡಿ ಇದೇ ಮೊದಲ ಬಾರಿ ಗ್ರಾನ್‌ಸ್ಲಾಮ್ ಡಬಲ್ಸ್ ಪ್ರಶಸ್ತಿ ಎತ್ತಿಹಿಡಿದಿದೆ. ಸ್ಟೋಸರ್ ಈ ಹಿಂದೆ 2005ರ ಯುಎಸ್ ಓಪನ್ ಹಾಗೂ 2006ರ ಫ್ರೆಂಚ್ ಓಪನ್‌ನಲ್ಲಿ ಲಿಸಾ ರೇಮಂಡ್ ಜೊತೆಗೂಡಿ ಪ್ರಶಸ್ತಿ ಜಯಿಸಿದ್ದರು. ಸ್ಟೋಸರ್ ಹಾಗೂ ಝಾಂಗ್ ಫೈನಲ್ ಹಾದಿಯಲ್ಲಿ ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಓಪನ್ ಚಾಂಪಿಯನ್‌ಗಳಾದ ಬಾರ್ಬೊರ ಕ್ರೆಜ್‌ಸಿಕೊವಾ ಹಾಗೂ ಕಟೆರಿನಾ ಸಿನಿಯಾಕೊವಾರನ್ನು ಸೋಲಿಸಿದ್ದರು.





