ಭಾರತಕ್ಕೆ ಪ್ರಾಬಲ್ಯ ಸಾಧಿಸುವ ವಿಶ್ವಾಸ
ತಿರುಗೇಟು ನೀಡಲು ಕಿವೀಸ್ ತಯಾರಿ

ನಾಳೆ ಎರಡನೇ ಏಕದಿನ
ವೌಂಟ್ ವೌಂಗನ್ಯೂ(ನ್ಯೂಝಿಲೆಂಡ್), ಜ.25: ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡು ಸರಣಿಯಲ್ಲಿ ಉತ್ತಮ ಆರಂಭ ಪಡೆದಿರುವ ಟೀಮ್ ಇಂಡಿಯಾ ಶನಿವಾರ ಇಲ್ಲಿ ನಡೆಯುವ ತನ್ನ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್‌ನ್ನು ಸೋಲಿಸಿ ಮತ್ತಷ್ಟು ಒತ್ತಡ ಹೇರುವ ವಿಶ್ವಾಸದಲ್ಲಿದೆ.
ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ದಾಂಡಿಗರು ತಮ್ಮದೇ ಮೈದಾನದಲ್ಲಿ ಭಾರತದ ಸ್ಪಿನ್‌ದ್ವಯರಾದ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್, ವೇಗದ ಬೌಲರ್ ಮುಹಮ್ಮದ್ ಶಮಿ ದಾಳಿಯನ್ನು ಎದುರಿಸಲಾಗದೆ ತಿಣುಕಾಡಿದ್ದರು.
ಆಸ್ಟ್ರೇಲಿಯದಲ್ಲಿ ಐತಿಹಾಸಿಕ ಸರಣಿ ಜಯಿಸಿ ಬಂದಿರುವ ಭಾರತದ ಆಟಗಾರರು ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು.
ಸ್ಪಿನ್ನರ್‌ಗಳಾದ ಕುಲದೀಪ್ ಹಾಗೂ ಚಹಾಲ್ ಮೊದಲ ಪಂದ್ಯದಲ್ಲಿ ಆರು ವಿಕೆಟ್ ಹಂಚಿಕೊಂಡಿದ್ದರು. ಎರಡನೇ ಪಂದ್ಯದಲ್ಲೂ ಅದೇ ಪ್ರದರ್ಶನ ಪುನರಾವರ್ತಿಸಲು ಎದುರು ನೋಡುತ್ತಿದ್ದಾರೆ.
ಭಾರತ ವಿಶ್ವಕಪ್‌ಗೆ ಮಧ್ಯಮ ಕ್ರಮಾಂಕವನ್ನು ಇನ್ನಷ್ಟೇ ಅಂತಿಮಗೊಳಿಸಬೇಕಾಗಿದೆ. ಸರಣಿಯಲ್ಲಿ ಕೇವಲ 1 ಪಂದ್ಯ ನಡೆದಿರುವ ಕಾರಣ ಆಡುವ -11ರ ಬಳಗದ ಕುರಿತು ಕೊಹ್ಲಿ ಪಡೆ ಹೆಚ್ಚು ಚಿಂತಿಸುತ್ತಿಲ್ಲ. ಬಿಸಿಸಿಐ ಆಡಳಿತ ನೋಡಿಕೊಳ್ಳುತ್ತಿರುವ ಆಡಳಿತಾಧಿಕಾರಿ ಸಮಿತಿಯು ಹಾರ್ದಿಕ್ ಪಾಂಡ್ಯ ಮೇಲಿನ ಅಮಾನತು ಕ್ರಮವನ್ನು ಹಿಂಪಡೆದ ಕಾರಣ ಅವರು ತಂಡವನ್ನು ಸೇರಲು ನ್ಯೂಝಿಲೆಂಡ್‌ನತ್ತ ಪ್ರಯಾಣ ಬೆಳೆಸಲಿದ್ದಾರೆ. ಅವರು 3ನೇ ಏಕದಿನ ಬಳಿಕ ಆಯ್ಕೆಗೆ ಲಭ್ಯವಿರುವ ಸಾಧ್ಯತೆಯಿದೆ. ನೇಪಿಯರ್‌ನಲ್ಲಿ ಭಾರತ ಆಲ್‌ರೌಂಡರ್ ವಿಜಯ ಶಂಕರ್‌ರನ್ನು ಕಣಕ್ಕಿಳಿಸಿತ್ತು. ಪಿಚ್ ಪರಿಸ್ಥಿತಿಯನ್ನು ಆಧರಿಸಿ ರವೀಂದ್ರ ಜಡೇಜರನ್ನು ಮತ್ತೆ ಕಣಕ್ಕಿಳಿಸುವ ಸಾಧ್ಯತೆಯಿದೆ. ನಾಯಕ ಕೊಹ್ಲಿಗೆ ಸರಣಿಯ ಕೊನೆಯ 2 ಪಂದ್ಯಗಳಿಂದ ವಿಶ್ರಾಂತಿ ನೀಡಿರುವ ಹಿನ್ನೆಲೆಯಲ್ಲಿ ಜ.28 ರಂದು ನಡೆಯುವ ಮೂರನೇ ಏಕದಿನದ ಬಳಿಕ ಅಂತಿಮ-11ರ ಬಳಗದಲ್ಲಿ ಭಾರೀ ಬದಲಾವಣೆಯಾಗುವ ನಿರೀಕ್ಷೆಯಿದೆ. ಮೊದಲ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಹಳೆಯ ಲಯಕ್ಕೆ ಮರಳಿರುವುದು ಭಾರತ ಪಾಳಯದಲ್ಲಿ ಹೊಸ ಹುರುಪು ತಂದಿದೆ. ಮೊದಲ ಪಂದ್ಯದಲ್ಲಿ ಎಡಗೈ ದಾಂಡಿಗ ಧವನ್ ಔಟಾಗದೆ 75 ರನ್ ಗಳಿಸಿದ್ದರು. ಕಿವೀಸ್ ಈ ಹಿಂದೆ ಭಾರತ ವಿರುದ್ಧ ಸ್ವದೇಶದಲ್ಲಿ 4-0 ಅಂತರದಿಂದ ಸರಣಿ ಜಯಿಸಿತ್ತು. ಒಂದು ವೇಳೆ 2ನೇ ಪಂದ್ಯದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ, 0-4 ರಿಂದ ಸರಣಿ ಸೋಲುವ ಅಪಾಯವಿದೆ. ನ್ಯೂಝಿಲೆಂಡ್‌ನ ಎರಡೂ ವಿಭಾಗ ಬಲಿಷ್ಠವಾಗಿದೆ. 2ನೇ ಏಕದಿನದಲ್ಲಿ ವೇಗಿ ಟಿಮ್ ಸೌಥಿ ಸ್ಥಾನಕ್ಕೆ ಸ್ಪಿನ್ನರ್ ಐಶ್ ಸೋಧಿ ಅವಕಾಶ ಪಡೆಯಬಹುದು. ಇತ್ತೀಚೆಗೆ ಶ್ರೀಲಂಕಾ ವಿರುದ್ಧ 2 ಪಂದ್ಯಗಳಲ್ಲಿ ಸೋಧಿ 5 ವಿಕೆಟ್ ಕಬಳಿಸಿದ್ದರು.
ಉಭಯ ತಂಡಗಳ ಸಂಭಾವ್ಯ 11 ಆಟಗಾರರು
►ಭಾರತ: 1. ರೋಹಿತ್ ಶರ್ಮಾ, 2. ಶಿಖರ್ ಧವನ್, 3. ವಿರಾಟ್ ಕೊಹ್ಲಿ(ನಾಯಕ), 4. ಅಂಬಟಿ ರಾಯುಡು, 5. ಕೇದಾರ್ ಜಾಧವ್, 6. ಎಂಎಸ್ ಧೋನಿ, 7. ವಿಜಯ ಶಂಕರ್, 8. ಕುಲದೀಪ್ ಯಾದವ್, 9. ಭುವನೇಶ್ವರ ಕುಮಾರ, 10. ಮುಹಮ್ಮದ್ ಶಮಿ, 11. ಯಜುವೇಂದ್ರ ಚಹಾಲ್.
►ನ್ಯೂಝಿಲೆಂಡ್: 1. ಮಾರ್ಟಿನ್ ಗಪ್ಟಿಲ್, 2. ಕಾಲಿನ್ ಮುನ್ರೊ, 3. ಕೇನ್ ವಿಲಿಯಮ್ಸನ್(ನಾಯಕ), 4. ರಾಸ್ ಟೇಲರ್, 5. ಟಾಮ್ ಲಥಮ್, 6. ಹೆನ್ರಿ ನಿಕೊಲ್ಸ್, 7. ಮಿಚೆಲ್ ಸ್ಯಾಂಟ್ನರ್, 8. ಟಿಮ್ ಸೌಥಿ/ಐಶ್ ಸೋಧಿ, 9. ಲಾಕಿ ಫರ್ಗ್ಯುಸನ್, 10. ಡಗ್ ಬ್ರೆಸ್‌ವೆಲ್, 11. ಟ್ರೆಂಟ್ ಬೌಲ್ಟ್.
ಪಂದ್ಯದ ಸಮಯ ಬೆಳಗ್ಗೆ 7.30 ಗಂಟೆಗೆ







