ರಣಜಿ ಸೆಮಿಫೈನಲ್: ಇನಿಂಗ್ಸ್ ಮುನ್ನಡೆಯ ನಿರೀಕ್ಷೆಯಲ್ಲಿ ಕರ್ನಾಟಕ
►ಪಾಂಡೆ ಬಳಗ 275ಕ್ಕೆ ಆಲೌಟ್ ►ಸೌರಾಷ್ಟ್ರ ಪ್ರಥಮ ಇನಿಂಗ್ಸ್ 227/7 ►ಮೋರೆಗೆ 5 ವಿಕೆಟ್‌ಗಳ ಗುಚ್ಛ

ಬೆಂಗಳೂರು, ಜ.25: ಬೆಳಗಾವಿ ಹುಡುಗ ರೋನಿತ್ ಮೋರೆ ಶುಕ್ರವಾರ ಕರ್ನಾಟಕ ತಂಡದ ಪಾಲಿನ ದಿನದ ಹೀರೊ ಆಗಿ ಮೂಡಿಬಂದರು. ಸೌರಾಷ್ಟ್ರದ ವಿರುದ್ಧದ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿ ಪಡೆಯ 5 ವಿಕೆಟ್ ಕಬಳಿಸಿದ ಅವರು, ಪಾಂಡೆ ಬಳಗದ ಪ್ರಥಮ ಇನಿಂಗ್ಸ್ ಮುನ್ನಡೆಯ ಕನಸಿಗೆ ರೆಕ್ಕೆ ಕಟ್ಟಿದ್ದಾರೆ. ಪ್ರವಾಸಿಗರು ತಮ್ಮ ಪ್ರಥಮ ಇನಿಂಗ್ಸ್‌ನಲ್ಲಿ 227 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದ್ದಾರೆ. ಇಲ್ಲಿಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ 9 ವಿಕೆಟ್‌ಗೆ 264 ರನ್‌ನಿಂದ ತನ್ನ ಪ್ರಥಮ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ 275 ರನ್‌ಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಗುರುವಾರ ಅಜೇಯರಾಗುಳಿದಿದ್ದ ವಿಕೆಟ್‌ಕೀಪರ್ ಶರತ್(83) ಶುಕ್ರವಾರ ಮತ್ತೆ 9 ರನ್ ಸೇರಿಸಿದರು. ಇನ್ನೊಂದು ತುದಿಯಲ್ಲಿದ್ದ ರೋನಿತ್ ಮೋರೆ 2 ರನ್ ಗಳಿಸಿ ಜಡೇಜಗೆ ವಿಕೆಟ್ ಒಪ್ಪಿಸಿದರು.
ಸೌರಾಷ್ಟ್ರ ಪರ ಜೈದೇವ್ 4, ಮಕ್ವಾನಾ 3 ಧರ್ಮೇಂದ್ರ ಜಡೇಜ 2 ಹಾಗೂ ಸಕಾರಿಯಾ ಒಂದು ವಿಕೆಟ್ ಪಡೆದರು.
ಕರ್ನಾಟಕದ ಉತ್ತಮ ಮೊತ್ತಕ್ಕೆ ಪ್ರತಿಯಾಗಿ ತನ್ನ ಪ್ರಥಮ ಇನಿಂಗ್ಸ್ ಆರಂಭಿಸಿದ ಜೈದೇವ್ ಬಳಗಕ್ಕೆ ಮೊದಲ ವಿಕೆಟ್‌ಗೆ ಹರ್ವಿಕ್ ದೇಸಾಯಿ(16) ಹಾಗೂ ಸ್ನೆಲ್ ಪಟೇಲ್(85) 41 ರನ್ ಸೇರಿಸಿದರು. ದೇಸಾಯಿಯನ್ನು ಔಟ್ ಮಾಡುವ ಮೂಲಕ ಮೋರೆ ತಮ್ಮ ವಿಕೆಟ್ ಬೇಟೆಯನ್ನು ಆರಂಭಿಸಿದರು. ವಿಶ್ವರಾಜ್ ಜಡೇಜ(5) ಮೋರೆಗೆ ಎರಡನೇ ಬಲಿಯಾದರು. 63 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಸೌರಾಷ್ಟ್ರ ತಂಡದ ಖಾತೆಗೆ ರಾಷ್ಟ್ರೀಯ ಆಟಗಾರ ಚೇತೇಶ್ವರ ಪೂಜಾರ(45) ಹಾಗೂ ಸ್ನೆಲ್ ಪಟೇಲ್ ಮೂರನೇ ವಿಕೆಟ್‌ಗೆ 74 ರನ್ ಸೇರಿಸಿದರು. ಭರ್ಜರಿ ಅರ್ಧಶತಕ ಸಿಡಿಸಿದ್ದ ಸ್ನೆಲ್, ಶ್ರೇಯಸ್ ಗೋಪಾಲ್ ಬೌಲಿಂಗ್‌ನಲ್ಲಿ ಕೀಪರ್ ಶರತ್‌ಗೆ ಕ್ಯಾಚ್ ನೀಡಿದರು. ಪೂಜಾರ ಅವರು ಮಿಥುನ್ ಬೌಲಿಂಗ್‌ನಲ್ಲಿ ಅವರಿಗೆ ಮರು ಕ್ಯಾಚ್ ನೀಡಿ ನಿರ್ಗಮಿಸಿದರು.
ಆ ಬಳಿಕ ಶೆಲ್ಡನ್ ಜಾಕ್ಸನ್(46) ಹಾಗೂ ಅರ್ಪಿತ್ ವಸವದಾ(ಅಜೇಯ 26) ಪ್ರವಾಸಿ ಬಳಗದ ಪರ ಉತ್ತಮವಾಗಿ ಬ್ಯಾಟ್ ಬೀಸಿದರು. ಪ್ರೇರಕ್ ಮಂಕಡ್(0) ಹಾಗೂ ಕಮಲೇಶ್ ಮಕ್ವಾನಾ(1) ವಿಕೆಟ್‌ಗಳನ್ನು ಶೀಘ್ರಗತಿಯಲ್ಲಿ ಕಬಳಿಸಿದ ಮೋರೆ ಕೊನೆಯಲ್ಲಿ ಕರ್ನಾಟಕ ಬಳಗದಲ್ಲಿ ಹರ್ಷ ಮೂಡಲು ಕಾರಣರಾಗಿದ್ದಾರೆ. ಸೌರಾಷ್ಟ್ರಕ್ಕೆ ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನೂ 48 ರನ್‌ಗಳ ಅಗತ್ಯವಿದ್ದು, ಉಳಿದ ಮೂರು ವಿಕೆಟ್‌ಗಳಲ್ಲಿ ಆತಿಥೇಯರ ಸವಾಲು ಮೀರುತ್ತದಾ ಎಂಬುದು ಶನಿವಾರದ ಕುತೂಹಲವಾಗಿದೆ.







