ಸೈನಾ ಸೆಮಿಗೆ: ಶ್ರೀಕಾಂತ್, ಸಿಂಧುಗೆ ಸೋಲು
ಇಂಡೋನೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್

ಜಕಾರ್ತ, ಜ.25: ಹೈದರಾಬಾದ್‌ನ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಈ ವರ್ಷಾರಂಭದಲ್ಲ್ಲೆ ಸತತ 2ನೇ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ. ಶುಕ್ರವಾರ ನಡೆದ ಇಂಡೋನೇಶ್ಯ ಮಾಸ್ಟರ್ಸ್‌ನ ಮಹಿಳಾ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಥಾಯ್ಲೆಂಡ್‌ನ ಪಾರ್ನ್‌ಪವೀ ಚೋಚುವಾಂಗ್ ಅವರನ್ನು 21-7, 21-18 ಗೇಮ್‌ಗಳ ಅಂತರದಿಂದ ಸೋಲಿಸಿದರು. ಮತ್ತೊಂದೆಡೆ ಭರವಸೆಯ ಆಟಗಾರ ಕಿಡಂಬಿ ಶ್ರೀಕಾಂತ್ ಹಾಗೂ ಪಿ.ವಿ.ಸಿಂಧು ತಮ್ಮ ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ಕಳೆದ ವಾರ ಮಲೇಶ್ಯ ಓಪನ್ ಟೂರ್ನಿಯ ಸೆಮಿಫೈನಲ್‌ವರೆಗೆ ಸಾಗಿದ್ದ 8ನೇ ಶ್ರೇಯಾಂಕದ ಸೈನಾ ಇಂದಿನ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು.
ಪಂದ್ಯದಲ್ಲಿ ಉತ್ತಮ ಆರಂಭ ಪಡೆದ ಅವರು, ಮಧ್ಯಂತರ ಅವಧಿಯಲ್ಲಿ 11-4 ರ ನಾಗಾಲೋಟದ ಮುನ್ನಡೆ ಪಡೆದರು.ಆ ಬಳಿಕ ಸ್ಫೋಟಿಸಲು ಆರಂಭಿಸಿದ ಸೈನಾ ಅಂತಿಮವಾಗಿ 21-7ರಿಂದ ಪ್ರಥಮ ಗೇಮ್‌ನಲ್ಲಿ ಅಧಿಪತ್ಯ ಸಾಧಿಸಿದರು. ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದ ಪಾರ್ನ್‌ಪವೀ 18 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರೂ ಸೈನಾ 21 ಅಂಕ ಗಳಿಸಿ 2ನೇ ಗೇಮ್ ವಶಪಡಿಸಿಕೊಂಡರು.
ಎರಡು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಸೈನಾ ಮುಂದಿನ ಸುತ್ತಿನ ಪಂದ್ಯದಲ್ಲಿ ಚೀನಾ ಶಟ್ಲರ್‌ಗಳಾದ ಹೆ ಬಿಂಜಿಯಾವೊ ಹಾಗೂ ಚೆನ್ ಕ್ಸಿಯಾಕ್ಸಿನ್ ಅವರ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.
ಸಿಂಧು, ಶ್ರೀಕಾಂತ್ ನೀರಸ ಪ್ರದರ್ಶನ
ಮತ್ತೊಂದೆಡೆ ಏಶ್ಯನ್ ಗೇಮ್ಸ್‌ನ ಬೆಳ್ಳಿ ಪದಕ ವಿಜೇತೆ ಸಿಂಧು ಅವರು ತಮ್ಮ ಬದ್ಧ ಎದುರಾಳಿ ಕರೊಲಿನಾ ಮರಿನ್ ಎದುರು 11-21, 12-21ರಿಂದ ಸೋತು ಟೂರ್ನಿಯಿಂದ ಹೊರ ನಡೆದರು. ಕೇವಲ 37 ನಿಮಿಷಗಳಲ್ಲಿ ಪಂದ್ಯ ಅಂತ್ಯಕಂಡಿತು.
ಏಶ್ಯನ್ ಗೇಮ್ಸ್ ಚಾಂಪಿಯನ್, ಸ್ಥಳೀಯ ಆಟಗಾರ ಜೋನಾಥನ್ ಕ್ರಿಸ್ಟಿ ಅವರ ವಿರುದ್ಧ 18-21, 19-21 ಗೇಮ್‌ಗಳ ಅಂತರದಲ್ಲಿ ಸೋತ ಭರವಸೆಯ ಆಟಗಾರ ಶ್ರೀಕಾಂತ್, ಮತ್ತೊಮ್ಮೆ ಕ್ವಾರ್ಟರ್‌ಫೈನಲ್‌ಗಷ್ಟೇ ತೃಪ್ತಿಪಟ್ಟರು. ಈ ಪಂದ್ಯದಲ್ಲಿ ಅವರು ಹಲವು ಅನಗತ್ಯ ತಪ್ಪುಗಳನ್ನು ಎಸಗಿದ್ದಲ್ಲದೆ ತಪ್ಪು ನಿರ್ಣಯಗಳನ್ನು ತೆಗೆದುಕೊಂಡು ಹಲವು ಗೇಮ್ ಪಾಯಿಂಟ್‌ಗಳನ್ನು ಎದುರಾಳಿಗೆ ಬಿಟ್ಟುಕೊಟ್ಟರು.







