ಪ್ರತಿಭಟನೆಗೆ ದ್ರೌಪದಿ ವಸ್ತ್ರಾಪಹರಣ ಪೋಸ್ಟರ್ ಬಳಕೆ : ಕಾಂಗ್ರೆಸ್ ಕ್ಷಮೆ ಯಾಚನೆಗೆ ಬಿಜೆಪಿ ಆಗ್ರಹ
ಹೈದರಾಬಾದ್, ಜ.25: ತೆಲಂಗಾಣದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಿ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯ ಸಂದರ್ಭ ದ್ರೌಪದಿ ವಸ್ತ್ರಾಪಹರಣದ ಪೋಸ್ಟರ್ ಬಳಸಿರುವ ಬಗ್ಗೆ ಬಿಜೆಪಿ ಆಕ್ಷೇಪಿಸಿದೆ. ಪೋಸ್ಟರ್‌ಗೆ ‘ತೆಲಂಗಾಣದಲ್ಲಿ ಪ್ರಜಾಪ್ರಭುತ್ವ’ ಎಂಬ ತಲೆಬರಹ ನೀಡಲಾಗಿತ್ತು. ಮತದಾರರನ್ನು ದ್ರೌಪದಿ ಹಾಗೂ ಚುನಾವಣಾ ಆಯೋಗವನ್ನು ದುಶ್ಯಾಸನ ಎಂಬಂತೆ ಚಿತ್ರಿಸಲಾಗಿತ್ತು.
ಚುನಾವಣಾ ಆಯೋಗವು ಮತದಾರರಾದ ದ್ರೌಪದಿಯ ವಸ್ತ್ರಾಪಹರಣ ಮಾಡುತ್ತಿರುವುದು ಹಾಗೂ ಒಂದು ಬದಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಮತ್ತು ಇನ್ನೊಂದು ಬದಿಯಲ್ಲಿ ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿ ಮೂಕಪ್ರೇಕ್ಷಕರಂತೆ ಇದನ್ನು ನೋಡುತ್ತಿರುವುದಾಗಿ ಪೋಸ್ಟರ್‌ನಲ್ಲಿ ಚಿತ್ರಿಸಲಾಗಿದೆ. ಪೋಸ್ಟರ್‌ನಲ್ಲಿ ಮಹಿಳೆ ಹಾಗೂ ಪೌರಾಣಿಕ ಪಾತ್ರಗಳ ಬಳಕೆ ಮಾಡಿರುವುದನ್ನು ಹೊಸದಾಗಿ ನೇಮಕಗೊಂಡಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅನುಮೋದಿಸುತ್ತಾರೆಯೇ ಎಂದು ತೆಲಂಗಾಣ ಬಿಜೆಪಿ ವಕ್ತಾರ ಕೃಷ್ಣಸಾಗರ ರಾವ್ ಪ್ರಶ್ನಿಸಿದ್ದು, ಮಹಿಳೆಯರನ್ನು ಅವಮಾನಿಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಿಭಟನೆ ನಡೆಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ಪೋಸ್ಟರ್‌ನಲ್ಲಿ ದ್ರೌಪದಿಯನ್ನು ಬಳಸಿಕೊಂಡಿರುವ ರೀತಿ ಸಂಪೂರ್ಣ ತಪ್ಪು ಎಂದು ಕೃಷ್ಣಸಾಗರರಾವ್ ಹೇಳಿದ್ದಾರೆ. ಸೋನಿಯಾ, ರಾಹುಲ್, ಪ್ರಿಯಾಂಕರ ಕಾರ್ಟೂನ್ ರಚಿಸಿದರೆ ಆ ಪಕ್ಷದವರ ಪ್ರತಿಕ್ರಿಯೆ ಹೇಗಿರಬಹುದು. ಸೋನಿಯಾ ಗಾಂಧಿಯವರ ಬಗ್ಗೆ ತನಗೆ ಬಹಳಷ್ಟು ಗೌರವವಿದೆ. ಕಾಂಗ್ರೆಸ್‌ನವರು ತಮ್ಮ ಹಕ್ಕು ಪಡೆಯುವುದಕ್ಕಾಗಿ ಹೋರಾಡಬಹುದು, ಆದರೆ ಮಹಿಳೆಯರನ್ನು ಅವಮಾನಿಸುವ ಮಟ್ಟಕ್ಕೆ ಇದು ಹೋಗಬಾರದು ಎಂದವರು ಹೇಳಿದ್ದಾರೆ.
ಆದರೆ ಪೋಸ್ಟರ್‌ನಲ್ಲಿ ಏನು ತಪ್ಪಿದೆ ಎಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಮರ್ರಿ ಶಶಿಧರ ರೆಡ್ಡಿ ಪ್ರಶ್ನಿಸಿದ್ದು, ಈ ಪ್ರಕರಣದ ಸಂಪೂರ್ಣ ಹೊಣೆಯನ್ನು ತಾನು ಹೊತ್ತುಕೊಳ್ಳುವುದಾಗಿ ತಿಳಿಸಿದ್ದಾರೆ. ಹಿಂದೂ ಭಾವನೆಗಳಿಗೆ ಘಾಸಿಯಾಗುವ ಯಾವುದೇ ದೃಶ್ಯ ಈ ಪೋಸ್ಟರ್‌ನಲ್ಲಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.