ಇಟಲಿ ಎದುರು ಉತ್ತಮ ಪ್ರದರ್ಶನ ನೀಡುವೆ: ಪ್ರಜ್ಞೇಶ್
ಕೋಲ್ಕತಾ, ಜ.25: ಜೀವನಶ್ರೇಷ್ಠ ಫಾರ್ಮ್‌ನಲ್ಲಿರುವ ಚೆನ್ನೈ ಟೆನಿಸ್ ಪಟು ಪ್ರಜ್ಞೇಶ್ ಗುಣೇಶ್ವರನ್ ಮುಂದಿನ ವಾರ ಆರಂಭವಾಗಲಿರುವ ಡೇವಿಸ್‌ಕಪ್ ವಿಶ್ವ ಗ್ರೂಪ್ ಕ್ವಾಲಿಫೈಯರ್‌ನಲ್ಲಿ ಇಟಲಿ ವಿರುದ್ಧ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಡಿನೋವಿನ ಸಮಸ್ಯೆಯಿಂದ ಬಳಲುತ್ತಿರುವ ಪ್ರಜ್ಞೇಶ್ ಇತ್ತೀಚೆಗೆ ಜೀವನಶ್ರೇಷ್ಠ 104ನೇ ರ್ಯಾಂಕಿಗೆ ತಲುಪಿದ್ದರು.‘‘ನಾನು ಹುಲ್ಲುಹಾಸಿನ ಟೆನಿಸ್ ಅಂಗಳದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲೆ. ಇತ್ತೀಚೆಗೆ ವಿಶ್ವದ ನಂ.23ನೇ ಆಟಗಾರ ಡೆನಿಸ್ ಶಪೊವಾಲೊವ್‌ರನ್ನು ಸೋಲಿಸಿರುವೆ. ಕಳೆದ ವರ್ಷಾಂತ್ಯದಲ್ಲಿ ನಾಲ್ಕರಿಂದ ಐದು ಟೂರ್ನಮೆಂಟ್‌ಗಳಲ್ಲಿ ಉತ್ತಮವಾಗಿ ಆಡಿದ್ದೇನೆ. ನಾಲ್ಕು ಚಾಲೆಂಜರ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದೇನೆ. ಅವೆಲ್ಲವೂ ನನ್ನ ಉತ್ತಮ ಫಲಿತಾಂಶವಾಗಿದೆ. ನಾವು ಮೇಲುಗೈ ಸಾಧಿಸಬೇಕಾದರೆ ಕಠಿಣ ಹೋರಾಟದ ಅಗತ್ಯವಿದೆ’’ಎಂದು ಪ್ರಜ್ಞೇಶ್ ಅಭಿಪ್ರಾಯಪಟ್ಟರು. 2018ರ ಋತುವಿನಲ್ಲಿ ಪ್ರಜ್ಞೇಶ್ ಎರಡು ಚಾಲೆಂಜರ್ ಪ್ರಶಸ್ತಿಗಳನ್ನು ಜಯಿಸಿದ್ದರು. ಹುಲ್ಲುಹಾಸಿನ ಸ್ಟಟ್‌ಗರ್ಟ್ ಓಪನ್ ಟೂರ್ನಿಯಲ್ಲಿ ಪ್ರಸ್ತುತ 27ನೇ ರ್ಯಾಂಕಿನಲ್ಲಿರುವ ಡೆನಿಸ್ ಶಪೊವಾಲೊವ್‌ರನ್ನು ಸೋಲಿಸಿ ಗಮನ ಸೆಳೆದಿದ್ದರು.





