ಪ್ರಧಾನಿ ನರೇಂದ್ರ ಮೋದಿಯ ಮೌಲ್ಯಮಾಪನ ಪ್ರಾರಂಭವಾಗಿದೆ: ಎಚ್.ವಿಶ್ವನಾಥ್

ಮೈಸೂರು,ಜ.25: ನರೇಂದ್ರ ಮೋದಿ ಸರ್ಕಾರದ ಮೌಲ್ಯ ಮಾಪನ ಪ್ರಾರಂಭವಾಗಿದೆ. ಮೋದಿಯವರ ಭರವಸೆಗಳು ಹುಸಿಯಾಗಿದೆ. ಜನರನ್ನು ನಂಬಿಸಿ ಮೋಸ ಮಾಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ನಗರದ ಖಾಸಗಿ ಹೋಟೆಲ್ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಗೋಸ್ಕರ ರಾಮ ಮಂದಿರ, 10 % ಮೀಸಲಾತಿ ಆಶ್ವಾಸನೆ ಕೊಡಲು ಪ್ರಾರಂಭ ಮಾಡಿದ್ದಾರೆ. ಜನರನ್ನು ನಂಬಿಸಲು ಇದು ಸುಳ್ಳಿನ ಕಂತೆಯಾಗಿದೆ. ನೋಟಿನ ಜೊತೆ ಮೋದಿ ಅಲೆಯು ಕೊಚ್ಚಿ ಹೋಗಿದೆ ಎಂದು ಹರಿಹಾಯ್ದರು.
ಮೋದಿಯವರು ನಾಲ್ಕುವರೆ ವರ್ಷದಿಂದ ಸುಳ್ಳಿನ ಭರವಸೆಯನ್ನು ನೀಡಿದ್ದಾರೆ. ನೋಟು ಅಮಾನ್ಯೀಕರಣದಿಂದ ಮೋದಿ ಅಲೆ ಕೊಚ್ಚಿ ಹೋಗಿದೆ. ಜನರ ಮುಂದೆ ಮೋದಿ ನಗೆಪಾಟಲಿಗೆ ಒಳಗಾಗಿದ್ದಾರೆ. ಬಿಜೆಪಿಯ ಹಿರಿಯ ನಾಯಕರುಗಳೇ ಇಂದು ಮೋದಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಂಡಲ್ ವರದಿಯನ್ನು ಜಾರಿಗೆ ತಂದವರು ಯಾರು ಎಂದು ಪ್ರಶ್ನಿಸಿದರು. ಕರ್ನಾಟಕದಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ವಿಫಲವಾಗಿದೆ. ಪ್ರತಿ ಶಾಸಕರು ರೆಸಾರ್ಟ್ ಬಿಟ್ಟು ತಮ್ಮ ತಮ್ಮ ಸ್ವಕ್ಷೇತ್ರಗಳಿಗೆ ತೆರಳಬೇಕು ಎಂದು ಹೇಳಿದರು.
ಗ್ಯಾಸ್ ನಲ್ಲಿ ಸಬ್ಸಿಡಿ ಕೊಡ್ತೀನಿ ಅಂದ ಮೋದಿಯವರಿಗೆ ನಮ್ಮ ಹೆಣ್ಣು ಮಕ್ಕಳು ನಮಗೆ ಯಾವ ಸಬ್ಸಿಡಿ ಬೇಡ ಎಂದು ಹೇಳುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ತಯಾರಿ ನಡೆಯುತ್ತಿದೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತ ಜನ ಯೋಚಿಸುತ್ತಿದ್ದಾರೆ. ಮೋದಿರವರ ಮೌಲ್ಯ ಮಾಪನ ನಡೆಯುತ್ತಿದೆ. ಅದಲ್ಲದೇ ಹೊಸ ಹೊಸ ಆಶ್ವಾಸನೆ ಕೊಡುತ್ತಿದ್ದಾರೆ. ರಾಮ ಮಂದಿರ ನಿರ್ಮಾಣ ಮಾಡೋಕೆ ಮುಂದಾಗಿದ್ದಾರೆ. ಆಗಲೇ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಲಿಲ್ಲ ಏಕೆ ಎಂದು ಪ್ರಶ್ನಿಸಿದರು. ಜನ ನೆಮ್ಮದಿಯಾಗಿ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಅರಾಜಕತೆಗೆ ಮೋದಿಯೇ ಪ್ರಮುಖ ಕಾರಣ. ಮೋದಿ ಸರ್ಕಾರ ಉದ್ಯೋಗ, ಆರ್ಥಿಕ ನೀತಿ,ರೈತರ ಆತ್ಮಹತ್ಯೆ ಸೇರಿದಂತೆ ಎಲ್ಲಾ ಕ್ಷೇತ್ರದ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ ಎಂದು ಹೇಳಿದರು.
ಸರ್ಕಾರ ಯಾವುದೇ ಕಾರಣಕ್ಕೂ ಬೀಳಲ್ಲ. ಮಂತ್ರಿಗಳು, ಶಾಸಕರು ರೆಸಾರ್ಟ್ ರಾಜಕಾರಣ ಮಾಡಿದ್ದು ಸಾಕು. ನಾನು ಈ ಬಗ್ಗೆ ನಮ್ಮ ಮಂತ್ರಿಗಳು, ಶಾಸಕರಿಗೆ ಪತ್ರ ಬರೆಯುತ್ತಿದ್ದೇನೆ. ಜನ ಜಾನುವಾರುಗಳು, ನೀರು ಮೇವು ಇಲ್ಲದೆ ನರಳುವ ಪರಿಸ್ಥಿತಿ ಎದುರಾಗಿದೆ. ಈ ಕೂಡಲೇ ಎಲ್ಲಾ ಸಚಿವರು, ಶಾಸಕರು ತಮ್ಮ ಸ್ವಕ್ಷೇತ್ರಕ್ಕೆ ಮರಳುವಂತೆ ಪತ್ರದಲ್ಲಿ ಮನವಿ ಮಾಡುತ್ತೇನೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳಿ, ಸರ್ಕಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಸಚಿವರು, ಶಾಸಕರಿಗೆ ಸಲಹೆ ನೀಡಿದರು. ಎಲ್ಲರೂ ತಮ್ಮ ತಮ್ಮ ಕ್ಷೇತ್ರ ಪ್ರವಾಸ ಮಾಡಲಿ ಎಂದರು.
ಯಡಿಯೂರಪ್ಪಗೆ ಯಾಕೆ ಆಪರೇಷನ್ ಮೇಲೆ ಅಷ್ಟೊಂದು ಆಸಕ್ತಿ ಗೊತ್ತಿಲ್ಲ. ಆಪರೇಷನ್ ಮೇಲೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಟೀಂ ಹೆಚ್ಚು ತಲೆ ಕೆಡಿಸಿಕೊಂಡಿದೆ. ಯಡಿಯೂರಪ್ಪ, ಶೋಭಾ ಟೀಂ ಬಿಟ್ಟು ಮತ್ಯಾರಿಗೂ ಆಪರೇಷನ್ ಮೇಲೆ ಇಂಟರೆಸ್ಟ್ ಇಲ್ಲ ಎಂದರು.
ಪತ್ರಿಕಾಗೊಷ್ಠಿಯಲ್ಲಿ ಜೆಡಿಎಸ್ ಮುಖಂಡರುಗಳಾದ ಪ್ರೊ.ಕೆ.ಎಸ್.ರಂಗಪ್ಪ, ಸಾರಾ ನಂದೀಶ್, ಲಿಂಗಪ್ಪ, ಮಲ್ಲೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ಅಬ್ದುಲ್ಲಾ, ಸೇರಿದಂತೆ ಹಲವರು ಉಪಸ್ಥಿತರಿದ್ದರು.







