ವಿವಾಹದ ನಡುವೆ ವಧುವಿಗೆ ಐದು ನಿಮಿಷ ಕಾಯಲು ಹೇಳಿ ವರ ತೆರಳಿದ್ದೆಲ್ಲಿಗೆ ಗೊತ್ತೆ?
ಈ ಸ್ವಾರಸ್ಯಕರ ವಿದ್ಯಮಾನಕ್ಕೆ ಕಾರಣವಾದ 'ವರ'ನನ್ನು ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ ಕೇಂದ್ರ ಕ್ರೀಡಾ ಸಚಿವರು!
![ವಿವಾಹದ ನಡುವೆ ವಧುವಿಗೆ ಐದು ನಿಮಿಷ ಕಾಯಲು ಹೇಳಿ ವರ ತೆರಳಿದ್ದೆಲ್ಲಿಗೆ ಗೊತ್ತೆ? ವಿವಾಹದ ನಡುವೆ ವಧುವಿಗೆ ಐದು ನಿಮಿಷ ಕಾಯಲು ಹೇಳಿ ವರ ತೆರಳಿದ್ದೆಲ್ಲಿಗೆ ಗೊತ್ತೆ?](https://www.varthabharati.in/sites/default/files/images/articles/2019/01/26/174730.gif)
ತಿರುವನಂತಪುರಂ, ಜ.26: ಕೇರಳದ ಫುಟ್ಬಾಲ್ ಆಟಗಾರನೊಬ್ಬನಿಗೆ ಫುಟ್ಬಾಲ್ ಕ್ರೀಡೆಯೆಂದರೆ ಅದೆಷ್ಟು ಅಚ್ಚುಮೆಚ್ಚೆಂದರೆ ತನ್ನ ವಿವಾಹ ಸಮಾರಂಭದ ನಡುವೆಯೇ ''ಐದು ನಿಮಿಷ ತಾಳು'' ಎಂದು ವಧುವಿಗೆ ಹೇಳಿ ಮದುವೆ ಮಂಟಪದಿಂದ ನೇರ ಫುಟ್ಬಾಲ್ ಅಂಗಣಕ್ಕೆ ತೆರಳಿದ ಸ್ವಾರಸ್ಯಕರ ವಿದ್ಯಮಾನ ವರದಿಯಾಗಿದೆ.
ವರ ರಿದ್ವಾನ್ ಮಲಪ್ಪುರಂ 7ಎಸ್ ಲೀಗ್ ನಲ್ಲಿ ಫಿಫಾ ಮೆಂಜೇರಿ ತಂಡದ ಸದಸ್ಯನಾಗಿದ್ದು ಫುಟ್ಬಾಲ್ ಎಂದರೆ ಈತನಿಗೆ ಅದೆಷ್ಟು ಪಂಚಪ್ರಾಣವೆಂದರೆ ಆತ ಮದುವೆ ಮಂಟಪದಿಂದಲೇ ಫುಟ್ಬಾಲ್ ಆಡಲು ತೆರಳಿರುವ ಈ ವಿದ್ಯಮಾನ ಕೇಂದ್ರ ಯುವಜನ ವ್ಯವಹಾರಗಳ ಮತ್ತು ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋರ್ ಅವರಿಗೇ ಅಚ್ಚರಿಯುಂಟು ಮಾಡಿದೆ.
ರಿದ್ವಾನ್ ಕಥೆಯನ್ನು ಸಚಿವರು ಟ್ವಿಟ್ಟರ್ ನಲ್ಲೂ ಶೇರ್ ಮಾಡಿದ್ದಾರೆ. ‘‘ತನ್ನ ವಿವಾಹದ ದಿನ ರಿದ್ವಾನ್ ತನ್ನ ವಧುವಿಗೆ ಐದು ನಿಮಿಷ ಕಾಯಲು ಹೇಳಿ ಫುಟ್ಬಾಲ್ ಆಡಲು ತೆರಳಿದ್ದಾರೆ. ಏನು ಫುಟ್ಬಾಲ್ ಪ್ರೇಮ! ನನಗೆ ಅವರನ್ನು ಭೇಟಿಯಾಗಬೇಕು’’ ಎಂದು ರಾಥೋರ್ ಟ್ವೀಟ್ ಮಾಡಿದ್ದಾರೆ.
ತಮ್ಮ ವಿವಾಹದ ದಿನ ರಿದ್ವಾನ್ ಇಕ್ಕಟ್ಟಿನಲ್ಲಿದ್ದರು. ಒಂದೋ ಮದುವೆ ಮಂಟಪದಲ್ಲಿ ಹಾಜರಿರಬೇಕು ಇಲ್ಲವೇ ತನ್ನ ತಂಡದ ಮಹತ್ವದ ಆಟದಲ್ಲಿ ಭಾಗಿಯಾಗಬೇಕು. ಫುಟ್ಬಾಲ್ ಆಡಲು ತೆರಳಿದ್ದ ಅವರಿಗೆ ಸಮಾಧಾನದ ವಿಚಾರವೆಂದರೆ ಅವರ ತಂಡಕ್ಕೆ ಜಯ ದೊರಕಿತ್ತು. ಆದರೆ ವಧು ಸಿಟ್ಟಾಗಿದ್ದಂತೂ ಸುಳ್ಳಲ್ಲ.
‘‘ಪಂದ್ಯ ಅಪರಾಹ್ನ ನಡೆಯುತ್ತಿದ್ದರೆ ಅದಕ್ಕಾಗಿ ವಿವಾಹವನ್ನೂ ರದ್ದುಗೊಳಿಸುತ್ತೀರಾ?’’ ಎಂದು ಆಕೆ ಪ್ರಶ್ನಿಸಿದ್ದಳೆಂದು ಸುದ್ದಿತಾಣವೊಂದು ವರದಿ ಮಾಡಿದೆ. ರಿದ್ವಾನ್ ಆಕೆಗೆ ಸಮಾಧಾನಕರ ಉತ್ತರ ನೀಡಿರಬಹುದೆಂದು ಊಹಿಸಲಾಗಿದೆ.
ಕೇರಳದಲ್ಲಿ 7ಎಸ್ ಲೀಗ್ ಒಂದು ಜನಪ್ರಿಯ ಫುಟ್ಬಾಲ್ ಪಂದ್ಯವಾಗಿದ್ದು ಸಾಮಾನ್ಯ ಫುಟ್ಬಾಲ್ ತಂಡದಲ್ಲಿದ್ದಂತೆ ಇಲ್ಲಿ 11 ಆಟಗಾರರ ಬದಲು ಪ್ರತಿ ತಂಡದಲ್ಲಿ ಕೇವಲ 7 ಸದಸ್ಯರಿರುತ್ತಾರೆ.