ಯಡಿಯೂರಪ್ಪ ಉತ್ತರ ನೀಡಬೇಕು: ಮುಖ್ಯಮಂತ್ರಿ ಕುಮಾರಸ್ವಾಮಿ
ಶ್ರೀಗಳಿಗೆ ತಪ್ಪಿದ ‘ಭಾರತ ರತ್ನ’
![ಯಡಿಯೂರಪ್ಪ ಉತ್ತರ ನೀಡಬೇಕು: ಮುಖ್ಯಮಂತ್ರಿ ಕುಮಾರಸ್ವಾಮಿ ಯಡಿಯೂರಪ್ಪ ಉತ್ತರ ನೀಡಬೇಕು: ಮುಖ್ಯಮಂತ್ರಿ ಕುಮಾರಸ್ವಾಮಿ](https://www.varthabharati.in/sites/default/files/images/articles/2019/01/26/174754.jpg)
ಬೆಂಗಳೂರು, ಜ. 26: ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮಿಯವರಿಗೆ ‘ಭಾರತ ರತ್ನ’ ಪ್ರಶಸ್ತಿ ಸಿಗದಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಉತ್ತರ ನೀಡಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಆಗ್ರಹಿಸಿದ್ದಾರೆ.
ಶನಿವಾರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವದ ಅಂಗವಾಗಿ ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿನ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳಿಗೆ ‘ಭಾರತ ರತ್ನ’ ಸಿಗದಿರುವ ಬಗ್ಗೆ ಯಡಿಯೂರಪ್ಪ ಇದುವರೆಗೂ ಏಕೆ ಮಾತನಾಡುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ನಾವು ಯಾವುದೇ ಆಪರೇಷನ್ ಕಮಲ ನಡೆಸುತ್ತಿಲ್ಲ ಎಂದು ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರ ಕುದುರೆ ವ್ಯಾಪಾರ ಇನ್ನೂ ನಿಂತಿಲ್ಲ. ತೆರೆ ಮರೆಯಲ್ಲಿ ಶಾಸಕರ ಖರೀದಿಗೆ ಪ್ರಯತ್ನ ನಡೆಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿ ಮತ್ತು ಹುತಾತ್ಮ ದಿನವನ್ನು ರಾಜ್ಯ ಸರಕಾರದಿಂದ ಆಚರಿಸುವ ಬಗ್ಗೆ ಶೀಘ್ರದಲ್ಲೆ ಸಮಾನ ಮನಸ್ಕರ ಸಭೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ಇದೇ ವೇಳೆ ಭರವಸೆ ನೀಡಿದರು.