ವಂಡ್ಸೆ ಮಾದರಿ ಘನ ತ್ಯಾಜ್ಯ ನಿರ್ವಹಣೆಗೆ ಗ್ರಾಪಂಗಳ ಚಿಂತನೆ

ಮಂಗಳೂರು, ಜ.26: ಘನತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ವಂಡ್ಸೆ ಮಾದರಿಯಲ್ಲಿ ಘನ ಸಂಪನ್ಮೂಲಗಳನ್ನಾಗಿ ಪರಿವರ್ತಿಸುವ ಘನ ಸಂಪನ್ಮೂಲ ನಿರ್ವಹಣಾ ಘಟಕಗಳನ್ನು ಪ್ರಾರಂಭಿಸುವ ಬಗ್ಗೆ ನರಿಂಗಾನ, ಬಾಳೆಪುಣಿ, ಕುರ್ನಾಡು ಗ್ರಾಪಂಗಳು ಗಂಭೀರ ಚಿಂತನೆ ನಡೆಸಿವೆ.
ಇತ್ತೀಚೆಗೆ ಈ ಮೂರು ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ 30 ಮಂದಿಯ ತಂಡ ಕುಂದಾಪುರ ತಾಲೂಕು ವಂಡ್ಸೆ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿದ್ದವು.
ಗ್ರಾಮ ಪಂಚಾಯತ್ ನಿಧಿಯಿಂದಲೇ ಘನ ಸಂಪನ್ಮೂಲ ನಿರ್ವಹಣಾ ಘಟಕಗಳನ್ನು ಸ್ಥಾಪಿಸಿ ಯಶ್ವಸಿಯಾಗಿ ನಿರ್ವಹಿಸುತ್ತಿರುವ ಘನ ಸಂಪನ್ಮೂಲ ನಿರ್ವಹಣಾ ಘಟಕವನ್ನು ವೀಕ್ಷಿಸಲಾಗಿದೆ.
ಪಂಚಾಯತ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ನೀಡಿದ ಮಾಹಿತಿ ಮತ್ತು ಕಾರ್ಯನುಭವದ ಮಾತುಗಳನ್ನು ಆಲಿಸಿದ ಮೂರು ಪಂಚಾಯತ್‌ಗಳ ತಂಡಗಳು ತ್ಯಾಜ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ವಂಡ್ಸೆ ಮಾದರಿಯ ಘನ ಸಂಪನ್ಮೂಲ ಘಟಕಗಳನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸುತ್ತಿವೆ. ಘನ ಸಂಪನ್ಮೂಲ ನಿರ್ವಹಣಾ ಕಾರ್ಯಕರ್ತರಿಗೆ ಉಚಿತವಾಗಿ ತರಬೇತಿ ನೀಡುವುದಾಗಿ ವಂಡ್ಸೆ ಪಂಚಾಯತ್ ಅಧ್ಯಕ್ಷರು ಭರವಸೆ ನೀಡಿದ್ದಾರೆ.
ಕುರ್ನಾಡು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಶೈಲಜಾ, ಉಪಾಧ್ಯಕ್ಷ ನಿತಿನ್‌ಕುಮಾರ್, ಸದಸ್ಯರು, ಪಿಡಿಒ ಕೇಶವ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ್ ಗಿರಿಧರ್ ರಾವ್, ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಜಾರಾಮ್ ಭಟ್ ಟಿ.ಜಿ. ಹಾಗೂ ಸ್ಥಳೀಯ ವರ್ತಕರು, ನರಿಂಗಾನ ಗ್ರಾಪಂ ಅಧ್ಯಕ್ಷ ಇಸ್ಮಾಯೀಲ್ ಮೀನಂಕೋಡಿ, ಉಪಾಧ್ಯಕ್ಷೆ ನಳಿನಾಕ್ಷಿ, ಸದಸ್ಯರು, ಬಾಳೆಪುಣಿ ಗ್ರಾಪಂ ಅಧ್ಯಕ್ಷೆ ಲೀಲಾವತಿ ಮತ್ತು ಸದಸ್ಯರ ಅಧ್ಯಯನ ತಂಡದೊಂದಿಗೆ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಸಂಯೋಜಕ ಚೇತನ್ ಕುಮಾರ್ ಭಾಗವಹಿಸಿದ್ದರು.







