ನಮ್ಮ ಮೆಟ್ರೊ ನಿಲ್ದಾಣದಲ್ಲಿ ಸಾಹಿತ್ಯ ಅಕಾಡೆಮಿಯಿಂದ ಪುಸ್ತಕ ಮಳಿಗೆ

ಹೊಸದಿಲ್ಲಿ,ಜ.26: ಬೆಂಗಳೂರಿನ ಎರಡು ಮೆಟ್ರೊ ನಿಲ್ದಾಣಗಳಲ್ಲಿ ಪುಸ್ತಕ ಮಳಿಗೆಗಳನ್ನು ತೆರೆಯಲು ಸಾಹಿತ್ಯ ಅಕಾಡೆಮಿ ನಿರ್ಧರಿಸಿದೆ. ಎಂ.ಜಿ ರಸ್ತೆ ಮತ್ತು ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ಈ ಮಳಿಗೆಗಳನ್ನು ತೆರೆಯಲಾಗುತ್ತಿದ್ದು ಜನರ ಮಧ್ಯೆ ಅಕಾಡೆಮಿಯನ್ನು ಜನಪ್ರಿಯಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2015ರಲ್ಲಿ ಅಕಾಡೆಮಿ ದಿಲ್ಲಿ ಮೆಟ್ರೊ ರೈಲು ನಿಗಮದ ಸಹಯೋಗದೊಂದಿಗೆ ದಿಲ್ಲಿಯ ಕಾಶ್ಮೀರಿ ಗೇಟ್ ಮೆಟ್ರೊ ನಿಲ್ದಾಣದಲ್ಲಿ ಪುಸ್ತಕ ಮಳಿಗೆ ತೆರೆದಿತ್ತು. ರಾಜೀವ್ ಚೌಕ್, ಗುರ್ಗಾಂವ್ ಮತ್ತು ನೊಯ್ಡಾ ಮೆಟ್ರೊ ನಿಲ್ದಾಣಗಳಲ್ಲೂ ಪುಸ್ತಕ ಮಳಿಗೆಗಳನ್ನು ತೆರೆಯುವ ಯೋಜನೆಯನ್ನು ಅಕಾಡೆಮಿ ರೂಪಿಸಿದೆ. ಮೆಟ್ರೊ ನಿಲ್ದಾಣಗಳಲ್ಲಿ ಪುಸ್ತಕ ಮಳಿಗೆಗಳನ್ನು ತೆರೆಯುವ ಮೂಲಕ ಜನರು ಪುಸ್ತಕಗಳನ್ನು ಓದುವ ಜೊತೆಗೆ ಅಕಾಡೆಮಿ ಬಗ್ಗೆ ತಿಳಿದುಕೊಳ್ಳುತ್ತಾರೆ. ಇದರಿಂದ ಹೆಚ್ಚಿನ ಓದುಗರನ್ನು ಸೆಳೆಯಬಹುದಾಗಿದೆ. ನಮ್ಮ ಅಸ್ತಿತ್ವದ ಬಗ್ಗೆ ಜನರಿಗೆ ತಿಳಿಯಬೇಕಿದೆ ಎಂದು ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಕೆ. ಶ್ರೀನಿವಾಸ ರಾವ್ ತಿಳಿಸಿದ್ದಾರೆ. ಸಾಹಿತ್ಯ ಅಕಾಡೆಮಿಯ ದಿಲ್ಲಿ ಗ್ರಂಥಾಲಯದಲ್ಲಿ 13,500 ಸದಸ್ಯರಿದ್ದಾರೆ. ಮುಂಬೈ, ಕೊಲ್ಕತಾ ಮತ್ತು ಬೆಂಗಳೂರಿನಲ್ಲಿ ಅಕಾಡೆಮಿಯ ಪ್ರಾದೇಶಿಕ ಗ್ರಂಥಾಲಯಗಳಿವೆ.





