ಸಂವಿಧಾನವನ್ನು ಉಳಿಸಲು ನಾವೆಲ್ಲರೂ ಪಣ ತೊಡಬೇಕು-ನಝೀರ್ ಕಾಝಿ

ಭಟ್ಕಳ, ಜ. 26: ದೇಶದಲ್ಲಿ ಸಂವಿಧಾನವನ್ನು ಅಳಿಸುವ, ಅದರ ಮಹತ್ವದಿಂದ ಜನರನ್ನು ವಂಚಿಸುವ ಕೆಲಸ ಬಹಳ ವ್ಯವಸ್ಥಿತವಾಗಿ ನಡೆಯುತ್ತಿದ್ದು ನಾವೆಲ್ಲರೂ ಸಂವಿಧಾನವನ್ನು ರಕ್ಷಿಸುವ ಮತ್ತು ಅದರ ಮಹತ್ವವನ್ನು ಜಗತ್ತಿಗೆ ಪರಿಚಯಿಸುವ ಕಾರ್ಯಕ್ಕಾಗಿ ಪಣತೊಡಬೇಕಾಗಿದೆ ಎಂದು ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಉಪಾಧ್ಯಕ್ಷ ನಝೀರ್ ಅಹ್ಮದ್ ಖಾಝಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಹೆಬಳೆ ಪಂಚಾಯತ್ ವ್ಯಾಪ್ತಿಯ ಸೈಯ್ಯದ್ ಅಲಿ ಕ್ಯಾಂಪಸ್ ನಲ್ಲಿರುವ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ನಲ್ಲಿ ಆಯೋಜಿಸಿದ್ದ 70ನೇ ಗಣತಂತ್ರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಸ್ಲಿಮನಾದವನು ತನ್ನ ದೇಶವನ್ನು ಪ್ರೀತಿಸುತ್ತಾನೆ. ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಮಂದಿ ಮುಸ್ಲಿಮರು ತಮ್ಮ ಜೀವದ ಹಂಗು ತೊರದು ಹೋರಾಡಿದ್ದಾರೆ. ಈ ದೇಶದಲ್ಲಿ ಸಂವಿಧಾನ ಎಲ್ಲರಿಗೂ ಬದುಕುವ ಸಮಾನ ಹಕ್ಕನ್ನು ನೀಡಿದೆ. ಇದನ್ನು ರಕ್ಷಿಸುವ ಹೊಣೆ ಎಲ್ಲರದ್ದಾಗಿದೆ ಎಂದ ಅವರು, ದೇಶದಲ್ಲಿ ಶೇ.30ರಷ್ಟು ಮಂದಿ ಬಡತನದ ರೇಖೆಗಿಂತ ಕಡಿಮೆ ಮಟ್ಟದ ಬದಕನ್ನು ನಡೆಸುತ್ತಿದ್ದಾರೆ. ಈ ದೇಶದ ಎಲ್ಲರಿಗೆ ಮೂರು ಹೊತ್ತಿನ ಆಹಾರ ಸಿಗುವಂತಾಗಬೇಕು ಈ ನಿಟ್ಟಿನಲ್ಲಿ ತಾವುಗಳು ದೇಶದ ಮಹಾನ್ ಪ್ರಜೆಗಳೆಂಬ ನೆಲೆಯಲ್ಲಿ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಬೇಕೆಂದು ಕರೆ ನೀಡಿದರು.
ಅನಿವಾಸಿ ಉದ್ಯಮಿ ಅಬ್ದುಲ್ ಬಾರಿ ಮೊಹತೆಶಮ್ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ ಸ್ವಾಗತಿಸಿದರು. ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮುಹಮ್ಮದ್ ರಝಾ ಮಾನ್ವಿ ಧನ್ಯವಾದ ಅರ್ಪಿಸಿದರು. ವಿದ್ಯಾರ್ಥಿ ಅಬುಲ್ ಖೈರ್ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯ ಸ್ಕೂಲ್ ಬೋರ್ಡ್ ಅಧ್ಯಕ್ಷ ಕಾದಿರ್ ಮೀರಾ ಪಟೇಲ್, ಸಲಾಹುದ್ದೀನ್ ಎಸ್.ಕೆ. ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ, ಯಾಹ್ಯಾ ರುಕ್ನುದ್ದೀನ್, ಹಬೀಬುಲ್ಲಾ ರುಕ್ನುದ್ದೀನ್, ಇಸ್ಮಾಯಿಲ್ ಝವರೇಝ್, ಝೀಯಾ ಮೊಹತೆಶಮ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.








