ತೆಂಡುಲ್ಕರ್‌ರ 29 ವರ್ಷ ಹಳೆಯ ದಾಖಲೆ ಮುರಿದ ನೇಪಾಳದ ಬಾಲಕ
ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿದ ಕಿರಿಯ ಕ್ರಿಕೆಟಿಗ ರೋಹಿತ್

ದುಬೈ, ಜ.26: ನೇಪಾಳದ ರೋಹಿತ್ ಪೌಡೆಲ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಳ್ಳುವ ಮೂಲಕ ದಾಖಲೆ ಪುಸ್ತಕಕ್ಕೆ ತನ್ನ ಹೆಸರು ಸೇರ್ಪಡೆಗೊಳಿಸಿದರು. ಈ ಮೂಲಕ ಲೆಜೆಂಡರಿ ಸಚಿನ್ ತೆಂಡುಲ್ಕರ್ ಹಾಗೂ ಶಾಹಿದ್ ಅಫ್ರಿದಿ ದಾಖಲೆಯನ್ನು ಪುಡಿಗಟ್ಟಿದ್ದಾರೆ.
ದುಬೈನ ಐಸಿಸಿ ಅಕಾಡಮಿಯಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನದಲ್ಲಿ ಯುಎಇ ವಿರುದ್ಧ 58 ಎಸೆತಗಳಲ್ಲಿ 55 ರನ್ ಗಳಿಸಿದ ರೋಹಿತ್ ನೇಪಾಳ ಪರ ಸರ್ವಾಧಿಕ ಸ್ಕೋರ್ ಗಳಿಸಿದರು. ಕೇವಲ 16 ವರ್ಷ ಹಾಗೂ 146 ದಿನಗಳಲ್ಲಿ ಅರ್ಧಶತಕ ಸಿಡಿಸಿದ ಕಿರಿಯ ಆಟಗಾರ ಎನಿಸಿಕೊಂಡರು. ಇದರೊಂದಿಗೆ ತೆಂಡುಲ್ಕರ್ ನಿರ್ಮಿಸಿದ್ದ 29 ವರ್ಷ ಹಳೆಯ ದಾಖಲೆಯೊಂದನ್ನು ಮುರಿದರು.
ಭಾರತದ ಬ್ಯಾಟಿಂಗ್ ದಂತಕತೆ ತೆಂಡುಲ್ಕರ್ ಫೈಸಲಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು. ಆಗ ಅವರ ವಯಸ್ಸು 16 ವರ್ಷ, 213 ದಿನವಾಗಿತ್ತು.
ಏಕದಿನ ಕ್ರಿಕೆಟ್‌ನಲ್ಲಿ ಶಾಹಿದ್ ಅಫ್ರಿದಿ ಶ್ರೀಲಂಕಾ ವಿರುದ್ಧ ಆಡಿದ್ದ ತನ್ನ ಚೊಚ್ಚಲ ಪಂದ್ಯದಲ್ಲಿ 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಆಗ ಅವರ ವಯಸ್ಸು 16 ವರ್ಷ, 217 ದಿನಗಳಾಗಿದ್ದವು.
ರೋಹಿತ್ ಅರ್ಧಶತಕದ ಕೊಡುಗೆ ನೆರವಿನಿಂದ ನೇಪಾಳ ತಂಡ 9 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿತ್ತು.ಇದಕ್ಕೆ ಉತ್ತರವಾಗಿ ಯುಎಇ ತಂಡ 97 ರನ್‌ಗೆ ಆಲೌಟಾಗಿ 145 ರನ್‌ಗಳ ಹೀನಾಯ ಸೋಲುಂಡಿತು. ಮೊದಲ ಏಕದಿನ ಪಂದ್ಯದಲ್ಲಿ ಯುಎಇಗೆ 3 ವಿಕೆಟ್‌ನಿಂದ ಶರಣಾಗಿದ್ದ ನೇಪಾಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು.
ರೋಹಿತ್ 2018ರ ಆಗಸ್ಟ್‌ನಲ್ಲಿ 15 ವರ್ಷ, 335 ದಿನಗಳಲ್ಲಿ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಸಂದರ್ಭದಲ್ಲಿ ವಿಶ್ವ ದಾಖಲೆ ನಿರ್ಮಿಸುವ ಅಂಚಿನಲ್ಲಿದ್ದರು. ಆಗ ಅವರು ಕ್ರಿಕೆಟ್ ಇತಿಹಾಸದಲ್ಲಿ ಚೊಚ್ಚಲ ಪಂದ್ಯವನ್ನಾಡಿದ 4ನೇ ಕಿರಿಯ ಕ್ರಿಕೆಟಿಗ ಎನಿಸಿದ್ದರು.







