ಪ್ರತೀ ವಿಧಾನ ಸಭಾ ಕ್ಷೇತ್ರಕ್ಕೆ 1 ಕೋಟಿ ರೂ.ಗಳ ಅನುದಾನ: ಡಿಸಿಎಂ ಜಿ. ಪರಮೇಶ್ವರ

ತುಮಕೂರು, ಜ. 26: ಬರಪರಿಸ್ಥಿತಿ ನಿರ್ವಹಣೆಗಾಗಿ 50 ಲಕ್ಷ ರೂ. ಹಾಗೂ ಕುಡಿಯುವ ನೀರಿನ ನಿರ್ವಹಣೆಗಾಗಿ 50 ಲಕ್ಷ ರೂ. ಸೇರಿದಂತೆ ಜಿಲ್ಲೆಯ ಪ್ರತೀ ವಿಧಾನ ಸಭಾ ಕ್ಷೇತ್ರಗಳಿಗೆ ತಲಾ 1 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಗಣರಾಜ್ಯೋತ್ಸವ ಧ್ವಜಾರೋಹಣದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು 11 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ರಾಜ್ಯದ 3ನೇ ದೊಡ್ಡ ಜಿಲ್ಲೆಯಾಗಿದ್ದು, ಎಲ್ಲ ತಾಲೂಕಿನಲ್ಲಿಯೂ ಬರ ಘೋಷಿಸಲಾಗಿದೆ. ಬರ ಪರಿಸ್ಥಿತಿಯನ್ನು ಅವಲೋಕಿಸಲು ಈಗಾಗಲೇ ಮಧುಗಿರಿ, ಪಾವಗಡ, ಶಿರಾ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದು, ಉಳಿದ ತಾಲೂಕುಗಳಿಗೂ ಪ್ರವಾಸ ಕೈಗೊಳ್ಳಲಿದ್ದೇನೆ. ಸಮಗ್ರ ಕುಡಿಯುವ ನೀರಿನ ನಿರ್ವಹಣೆಗಾಗಿ ಈಗಾಗಲೇ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಗೆ ಹಣ ಜಮಾ ಮಾಡಲಾಗಿದ್ದು, ಬರ ನಿರ್ವಹಣೆಗಾಗಿ ಕ್ರಿಯಾ ಯೋಜನೆ ತಯಾರಿಸಲು ಸೂಚನೆ ನೀಡಲಾಗಿದೆ ಎಂದರು.
ಬೆಳೆ ಸಾಲ ಪಡೆದ ರೈತರಿಗೆ ಆತ್ಮಹತ್ಯೆಯೊಂದೇ ಅಂತಿಮ ದಾರಿಯಲ್ಲ. ರೈತರ ನೆರವಿಗಾಗಿ ಸರಕಾರ ಸದಾ ಬದ್ಧವಾಗಿದ್ದು, ರೈತರ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.ರಾಜ್ಯ ಸರಕಾರ ಲಕ್ಷಾಂತರ ರೈತ ಬೆಳೆ ಸಾಲ ಮನ್ನಾ ಮಾಡಲಾಗುತ್ತಿದ್ದು, ಯಾವುದೇ ರೈತ ಆತ್ಮಹತ್ಯೆ ಯೋಚನೆ ಮಾಡಬಾರದೆಂದು ಮನವಿ ಮಾಡಿದರು. ಆತ್ಮಹತ್ಯೆಗೊಳಗಾದ ರೈತನ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ಧನ, ಕುಟುಂಬಕ್ಕೆ ನೆರವು ನೀಡಲಾಗುವುದಲ್ಲದೆ ರೈತನ ಪತ್ನಿಗೆ 2000ರೂ.ಗಳ ಭತ್ಯೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅನೇಕ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮುಂದಿನ 5 ವರ್ಷಗಳಲ್ಲಿ ಮಾಡಲು ಯೋಜನೆ ರೂಪಿಸಲಾಗಿದ್ದು, 2019-20ನೇ ಸಾಲಿನ ರಾಜ್ಯ ಆಯ-ವ್ಯಯದಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ಕಲ್ಪಿಸಲು ಹಾಗೂ ಜ್ವಲಂತವಾಗಿರುವ ನೀರಾವರಿ ಸಮಸ್ಯೆ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಪ್ರಸ್ತಾಪ ಮಾಡಲಾಗಿದೆ. ಬಹು ನಿರೀಕ್ಷಿತ ಎತ್ತಿನ ಹೊಳೆ ಯೋಜನೆಗೆ ಸಾಕಷ್ಟು ಹಣವನ್ನು ಒದಗಿಸಲಾಗಿದೆ. ಬೆಂಗಳೂರು ಜಿಲ್ಲೆಯಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಿದ ಮಾದರಿಯಲ್ಲೇ ಕೊರಟಗೆರೆ ತಾಲೂಕಿನಲ್ಲಿ 2500 ಎಕರೆ ಭೂಮಿಯನ್ನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದ್ದು, ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಏಷ್ಯಾ ಖಂಡದಲ್ಲೇ 2ನೇ ಅತಿ ದೊಡ್ಡ ಕೈಗಾರಿಕಾ ಕ್ಷೇತ್ರವಾಗಿ ವಸಂತ ನರಸಾಪುರ ಬೆಳೆಯುತ್ತಿದ್ದು, ಪ್ರತಿಷ್ಠಿತ ಕೈಗಾರಿಕೆಗಳು ಸಾವಿರಾರು ಕೋಟಿ ರೂ.ಗಳ ಬಂಡವಾಳ ಹೂಡುತ್ತಿವೆ. ಮುಂದಿನ ಆರು ತಿಂಗಳಲ್ಲಿ ಜಪಾನೀಸ್ ಟೌನ್‍ಶಿಪ್, ಶಾಲಾ ಕಾಲೇಜುಗಳು, ಮನರಂಜನಾ ಕೇಂದ್ರ, ಶಾಪಿಂಗ್ ಮಾಲ್, ಕನ್‍ವೆನ್ಷನ್ ಕೇಂದ್ರ ಸೇರಿದಂತೆ ತುಮಕೂರು ಮೆಷಿನ್ ಟೂಲ್ಸ್ ಸಂಸ್ಥೆ ನಿರ್ಮಾಣ ಕಾಮಗಾರಿಗಳು ಪ್ರಾರಂಭವಾಗುತ್ತವೆ. ಎಚ್.ಎಂ.ಟಿ ಜಾಗದಲ್ಲಿ ಉಪಗ್ರಹಕ್ಕೆ ಬೇಕಾದಂತಹ ವಸ್ತುಗಳ ಉತ್ಪಾದನೆ ಮತ್ತು ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಇಸ್ರೋ ಸಂಸ್ಥೆ ಮುಂದಾಗಿದೆ ಎಂದರು.
ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಬರ್-ಬನ್ ರೈಲು ಮಾರ್ಗ ನಿರ್ಮಾಣಕ್ಕಾಗಿ ರೈಲ್ವೆ ಇಲಾಖೆಯೊಂದಿಗೆ ಚರ್ಚಿಸಲಾಗಿದೆ. ಮೀರಜ್-ಬಾಂಬೆ-ಪೂನಾ ಮಾರ್ಗವನ್ನು ಹೊರತುಪಡಿಸಿ ಬೆಂಗಳೂರು-ತುಮಕೂರಿಗೆ ಪ್ರತ್ಯೇಕ ಸಬರ್-ಬನ್ ರೈಲು ಮಾರ್ಗ ನಿರ್ಮಾಣ ಮಾಡಲು ಡಿಪಿಆರ್ ನಲ್ಲಿ ಸೇರಿಸಲಾಗಿದ್ದು, ಬೆಂಗಳೂರು ಹಾಗೂ ತುಮಕೂರಿನಲ್ಲಿ ಏಕಕಾಲದಲ್ಲಿ ಸಬರ್ ಬನ್ ರೈಲು ಮಾರ್ಗ ಪ್ರಾರಂಭಕ್ಕೆ ಚಿಂತನೆ ನಡೆಸಲಾಗಿದೆ. ಅಲ್ಲದೆ ಬೆಂಗಳೂರು-ವಸಂತನರಸಾಪುರದವರೆಗೆ ಮೆಟ್ರೋ ರೈಲು ಸಂಚಾರ ಯೋಜನೆಗೆ ಬೇಡಿಕೆಯಿಟ್ಟಿದ್ದು, ರೈಲ್ವೆ ಇಲಾಖೆ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ವಸಂತ ನರಸಾಪುರದಲ್ಲಿರುವ ಕೈಗಾರಿಕಾ ಪ್ರದೇಶವು ತುಮಕೂರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊ ಯ್ಯಲಿದ್ದು,ತುಮಕೂರು ಬಹು ದೊಡ್ಡದಾಗಿ ಬೆಳೆಯಲು ಪೂರಕವಾಗಿದೆ.ವಸಂತನರಸಾಪುರದಲ್ಲಿ ಕೈಗಾರಿಕೆ ಸ್ಥಾಪಿಸಿದ ವರು ಅರ್ಹ ಸ್ಥಳೀಯರಿಗೆ ಉದ್ಯೋಗ ನೀಡುವ ಬಗ್ಗೆ ಮುಂದಿನ ವಾರ ಸಭೆ ಕರೆದು ನಿರ್ಣಯ ಕೈಗೊಳ್ಳಲಾಗು ವುದು.ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ತಲಾ ಶೇಕಡಾ 50ರಂತೆ ಅನುದಾನ ಒದಗಿಸಲಾಗಿರುವ ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಯಡಿ ಈಗಾಗಲೇ ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೊಳ್ಳಾಗಿದೆ.ಇದರಿಂದ ಬರುವ ದಿನಗಳಲ್ಲಿ ತುಮಕೂರು ಗಣನೀಯ ಬದಲಾವಣೆ ಕಾಣಲಿದೆ ಎಂದರು.
ಜರ್ಮನ್ ಹಾಗೂ ಫ್ರಾನ್ಸ್ ದೇಶಗಳಿಗೆ ಭೇಟಿ ನೀಡಿ ತ್ಯಾಜ್ಯದಿಂದ ವಿದ್ಯುಚ್ಛಕ್ತಿ ಉತ್ಪಾದನೆ ಮಾಡುವ ಘಟಕ ಸ್ಥಾಪನೆ ಬಗ್ಗೆ ಅಧ್ಯಯನ ನಡೆಸಿದ್ದು,ಬೆಂಗಳೂರಿನಲ್ಲಿ 6 ಕಡೆ ಘಟಕ ಸ್ಥಾಪನೆಗಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ತುಮಕೂರು ನಗರದಲ್ಲಿ ಪ್ರಸ್ತುತ 150 ಟನ್ ಕಸ ಉತ್ಪಾದನೆಯಾಗುತ್ತಿದ್ದು, ಇನ್ನೆರಡು ತಿಂಗಳಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿರುವ ಅಜ್ಜಗೊಂಡನಹಳ್ಳಿಯಲ್ಲಿ 500 ಟನ್ ತ್ಯಾಜ್ಯವನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಸಾಮಥ್ರ್ಯದ 1 ಘಟಕವನ್ನು ಸ್ಥಾಪಿಸಲು ಉದ್ದೇಶಿಸಿಸಲಾಗಿದೆ. ಇದರಿಂದ ದೊರೆಯುವ ಶೇ.5ರಷ್ಟು ಬೂದಿಯನ್ನು ಸಿಮೆಂಟ್‍ನೊಂದಿಗೆ ಬೆರೆಸಿ ಕಟ್ಟಡ ನಿರ್ಮಾಣಕ್ಕೆ ಬಳಸಬಹುದಾಗಿದೆ ಎಂದು ತಿಳಿಸಿದರು.
ತುಮಕೂರು ನಗರ ಪಾಲಿಕೆಯಲ್ಲಿ ಬಾಕಿಯಿರುವ ತೆರಿಗೆ ವಸೂಲಿಯನ್ನು ಸಮರ್ಪಕವಾಗಿ ನಿರ್ವಹಿಸಲು ಐಎಎಸ್ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಿಸಲಾಗಿದೆ.ಸ್ಮಾರ್ಟ್ ಸಿಟಿ ಯೋಜನೆಗೂ ಐಎಎಸ್ ಅಧಿಕಾರಿಯನ್ನು ನೇಮಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದರಲ್ಲದೆ ಜಿಲ್ಲಾಡಳಿತ ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಿ ಕಾರ್ಯನಿರ್ವ ಹಿಸಬೇಕೆಂದು ಜಿಲ್ಲಾಧಿಕಾರಿ ಡಾ|| ರಾಕೇಶ್ ಕುಮಾರ್‍ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮುಕ್ಕಾಲು ಭಾಗ ಒಣಪ್ರದೇಶ ಇರುವುದರಿಂದ ಕಡಿಮೆ ನೀರಿನಲ್ಲಿ ಹೆಚ್ಚಿನ ಬೆಳೆ ಬೆಳೆಯುವಂತ ಇಸ್ರೇಲ್ ಮಾದರಿಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ.ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಈ ಹಿಂದೆ 2 ಬಾರಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದ್ದರೂ ಪ್ರಶಸ್ತಿಯ ನಿರೀಕ್ಷೆ ಹುಸಿಯಾಗಿದೆ. ಪ್ರಶಸ್ತಿಗೆ ಅಗತ್ಯವಿರುವ ಕೇಂದ್ರದ ಮಾನದಂಡಗಳ ಬಗ್ಗೆ ಮಾಹಿತಿಯಲ್ಲವೆಂದು ಹೇಳಿದರು.
ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಾಕಿಯಿರುವ 2000ಕೋಟಿ ರೂ.ಗಳಿಗೂ ಹೆಚ್ಚು ತೆರಿಗೆ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೋಟ್ಯಾಂತರ ರೂ.ಗಳ ತೆರಿಗೆ ಪಾವತಿಸದ ಮನೆ ಮಾಲೀಕರು, ವಾಣಿಜ್ಯ ಸಂಸ್ಥೆಗಳು ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಪ್ರಸಕ್ತ ಆರ್ಥಿಕ ವರ್ಷದೊಳಗಾಗಿ ಬಾಕಿಯಿರುವ ತೆರಿಗೆಯನ್ನು ವಸೂಲಿ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಸಂಸದ ಎಸ್.ಪಿ. ಮುದ್ದಹನುಮೇಗೌಡ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕೆ ಜಾಯ್, ಜಿಲ್ಲ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿ ಕೃಷ್ಣ, ವಿವಿಧ ಅಧಿಕಾರಿಗಳು,ಸಿಬ್ಬಂದಿಗಳು ಹಾಜರಿದ್ದರು.







