ತುಮಕೂರು ಮೂಲಕ ಬೆಂಗಳೂರಿನತ್ತ ಮದ್ಯ ನಿಷೇದ ಆಂದೋಲನ ಪಾದಯಾತ್ರೆ

ತುಮಕೂರು, ಜ. 26: ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಚಿತ್ರದುರ್ಗದಿಂದ ಬೆಂಗಳೂರಿಗೆ ಹೊರಟಿರುವ 2500 ಮಹಿಳೆಯರನ್ನು ಒಳಗೊಂಡ ಪಾದಯಾತ್ರೆ ಇಂದು ತುಮಕೂರು ಮೂಲಕ ಬೆಂಗಳೂರು ಕಡೆಗೆ ತನ್ನ ಯಾತ್ರೆ ಮುಂದುವರೆಸಿದೆ.
ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇದ ಮಾಡಬೇಕೆಂದು ವಿವಿಧ ಜನಪರ ಸಂಘಟನಗಳ ಕಾರ್ಯಕರ್ತರು ಕಳೆದ 19 ರಿಂದ ಚಿತ್ರದುರ್ಗದ ಮುರುಘಾ ಮಠದಿಂದ ಬೆಂಗಳೂರಿಗೆ ಪಾದೆಯಾತ್ರೆ ಆರಂಭಿಸಿದ್ದು, ಶಿರಾ ಮೂಲಕ ತುಮಕೂರು ನಗರ ಪ್ರವೇಶಿಸಿದ್ದ ಪಾದಯಾತ್ರೆ, ಶುಕ್ರವಾರ ರಾತ್ರಿ ನಗರದ ಶಿರಾಗೇಟ್‍ನ ಕಾಳಿದಾಸ್ ಪದವಿಪೂರ್ವ ಕಾಲೇಜಿನಲ್ಲಿ ತಂಗಿದ್ದು, ಶನಿವಾರ ಬೆಳಗ್ಗೆ 8 ಗಂಟೆಗೆ ಹೊರಟ ಮಹಿಳೆಯರ ಜಾಥಾ ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ,10 ಗಂಟೆ ಸುಮಾರಿಗೆ ಆದರ್ಶನಗರದಲ್ಲಿರುವ ಶ್ರೀಶಿರಡಿ ಸಾಯಿಬಾಬಾ ಮಂದಿರದಲ್ಲಿ ಬೆಳಗಿನ ಉಪಹಾರ ಸೇವಿಸಿತ್ತು. ನಗರದ ವಿವಿಧ ಪ್ರಗತಿಪರ ಸಂಘಟನಗಳ ಮುಖಂಡರು ಜಾಥಾದಲ್ಲಿ ಸಾಗಿದ್ದ ಮಹಿಳೆಯರಿಗೆ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿದ್ದರು.
ಬೆಳಗಿನ ಉಪಹಾರ ಮುಗಿಸಿ, ರಾಷ್ಟ್ರೀಯ ಹೆದ್ದಾರಿ 206 ಹಾಗೂ ಹೊಸ 48ರ ಮೂಲಕ ಸಿದ್ದಗಂಗಾ ಮಠಕ್ಕೆ ಸಾಗಿದ ಪಾದಯಾತ್ರೆ, ಸಿದ್ದಗಂಗಾ ಮಠದ ದಾಸೋಹದಲ್ಲಿ ಮಧ್ಯಾಹ್ನದ ಊಟ ಸೇವಿಸಿ, ನಂತರ ಜಾಸ್‍ಟೋಲ್ ಮೂಲಕ ಪಂಡಿತನಹಳ್ಳಿ ಬಳಿ ಇರುವ ಶ್ರೀ ಆದಿಚುಂಚನಗಿರಿ ಮಠದಲ್ಲಿ ತಂಗಿದ್ದು, ಭಾನುವಾರ ಬೆಳಗ್ಗೆ ಎಂದಿನಂತೆ ತನ್ನ ಪಯಣ ಮುಂದುವರೆಸಲಿದೆ.
ಹೊಸಬೆಳಕು ಹೊಸಬದುಕು(ರಿ.),ರೋಟರಿ ಕ್ಲಬ್ ತುಮಕೂರು,ಹಾಗೂ ಜಿ.ಜಿ.ವಿ.ಗ್ರಾಮೀಣಾಭಿವೃದ್ದಿ ಸಂಸ್ಥೆ, ಸಿಗ್ನಾಯುವಕೇಂದ್ರ, ಆದರ್ಶ ಪರಿಸರ ಟ್ರಸ್ಟ್, ಮತ್ತು ವಿವಿದ ಸಂಘಸಂಸ್ಥೆಗಳು ಸೇರಿ ಪಾದಯಾತ್ರೆಗೆ ಸಹಕಾರ ನೀಡಿದ್ದಾರೆ.
ಸಾಯಿ ಮಂದಿರ ಟ್ರಸ್ಟಿಗಳು, ವಾಸವಿ ಸಂಸ್ಥೆ, ರಮೇಶ್‍ಬಾಬು ರವರು ಊಟೋಪಚಾರವನ್ನು, ಭಾರತೀಯ ವೈದ್ಯಕೀಯ ಸಂಘದವರು ಔಷದೋಪಚಾರಕ್ಕೆ ವ್ಯವಸ್ಥೆ ಮಾಡಿದ್ದರು.ಈ ಕಾರ್ಯಕ್ರಮಕ್ಕೆ ತುಮಕೂರಿನಲ್ಲಿ ಯತಿರಾಜು,ಎಂ.ಬಸವಯ್ಯ,ಆರ್.ವಿ.ಪುಟ್ಟಕಾಮಣ್ಣ,ತುಂಡೋಟಿ ನರಸಿಂಹಯ್ಯ ಮುಂತಾದವರು ಕೆಲ ಹೊತ್ತು ಜಾಥಾದಲ್ಲಿ ಭಾಗಿಯಾಗಿದ್ದರು.







