ಜಿಲ್ಲೆಗೆ ಪ್ರವಾಸಿಗರ ಸಂಖ್ಯೆಯಲ್ಲಿ 3 ಪಟ್ಟು ಹೆಚ್ಚಳ: ಸಚಿವೆ ಜಯಮಾಲ
ಉಡುಪಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ

ಉಡುಪಿ, ಜ.26: ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಕೈಗೊಂಡ ಹಲವು ಯೋಜನೆಗಳ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಅತ್ಯಂತ ಸುಂದರ ಪ್ರವಾಸಿ ತಾಣಗಳು ಅತೀ ಹೆಚ್ಚಿನ ಪ್ರವಾಸಿಗರನ್ನು ಸೆಳೆೆಯುತಿದ್ದು, ಜಿಲ್ಲೆಗೆ ಪ್ರವಾಸಿಗರ ಭೇಟಿ ಮೂರು ಪಟ್ಟು ಹೆಚ್ಚಾಗಿದೆ. ಇದೀಗ ಪ್ರವಾಸಿಗರ ಸಂಖ್ಯೆ 2.48 ಕೋಟಿ ದಾಟಿದೆ ಎಂದು ಜಿಲ್ಲಾ ಉಸ್ತುಾರಿ ಸಚಿವೆ ಡಾ.ಜಯಮಾಲ ಹೇಳಿದ್ದಾರೆ.
ಉಡುಪಿಯ ಬೀಡಿನಗುಡ್ಡೆಯ ಮಹಾತ್ಮ ಗಾಂಧೀ ಬಯಲು ರಂಗ ಮಂದಿರದಲ್ಲಿ ಶನಿವಾರ ನಡೆದ ಜಿಲ್ಲಾ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಗಣರಾಜ್ಯೋತ್ಸವ ಸಂದೇಶ ನೀಡಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಜಯಮಾಲ ಮಾತನಾಡಿದರು.
ಜಿಲ್ಲೆಯ 98ಕಿ.ಮೀ. ಉದ್ದದ ಬೀಚ್‌ನೊಂದಿಗೆ ಜಿಲ್ಲೆಯ ನದಿಗಳು, ಹ್ನಿನೀರು, ದೇವಸ್ಥಾನ, ಬಸದಿ, ಚರ್ಚ್, ಪುರಾತತ್ವ ಸ್ಮಾರಕಗಳೊಂದಿಗೆ ಇಲ್ಲಿ ಒದಗಿಸಲಾಗಿರುವ ಹೌಸ್‌ಬೋಟ್, ಹೋಮ್ ಸ್ಟೇ, ಜನಕ್ರೀಡೆಗಳು, ಹೆಲಿ ಟೂರಿಸಂ, ಸ್ಕೂಬಾ ಡೈವಿಂಗ್, ವೈನ್ ಉತ್ಸವಗಳು ಪ್ರವಾಸಿಗಳನ್ನು ಅತಿಯಾಗಿ ಆಕರ್ಷಿಸುತ್ತಿವೆ ಎಂದರು.
ಇದೀಗ ಪಡುಬಿದ್ರೆ ಬೀಚ್ ಅಂತಾರಾಷ್ಟ್ರೀಯ ಗುಣಮಟ್ಟದ ಬ್ಲೂಪ್ಲಾಗ್ ಸರ್ಟಿಫಿಕೇಶನ್ ಯೋಜನೆಯಲ್ಲಿ ಆಯ್ಕೆಯಾಗಿದ್ದು, ಯೋಜನೆಯ ಅನುಷ್ಠಾನ ಕ್ಕಾಗಿ 8 ಕೋಟಿ ರೂ.ಬಿಡುಗಡೆಯಾಗಿದೆ. ಇದಕ್ಕೆ ರಾಜ್ಯ ಸರಕಾರದಿಂದ 2.68 ಕೋಟಿ ರೂ.ಗಳನ್ನು ಬಿಡುಗಡೆಮಾಡಲಾಗಿದೆ ಎಂದರು.
ನಗರದಲ್ಲೀಗ ಕಾರ್ಯಾಚರಿಸುತ್ತಿರುವ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸ್ಮಾರಕ ತಾಯಿಮಕ್ಕಳ ಸಂಪೂರ್ಣ ಹವಾನಿಯಂತ್ರಿತ ಆಸ್ಪತ್ರೆಯನ್ನು ಸರಕಾರಿ-ಖಾಸಗಿ ಒಪ್ಪಂದದ ಮೇರೆಗೆ ಎಲ್ಲಾ ವರ್ಗದ ಜನರಿಗೆ ಸಂಪೂರ್ಣವಾಗಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಎಂಡೋಸಲ್ಫಾನ್ ಚಿಕಿತ್ಸೆ: ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರ ಆರೋಗ್ಯ ಸುಧಾರಣೆ ಯೋಜನೆ ಹಾಗೂ ಪುನರ್ವಸತಿ ಕಾರ್ಯಕ್ರಮದಡಿ ಒಟ್ಟು 1557 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 1328 ರೋಗಿಗಳಿಗೆ ಮಾಶಾಸನ ನೀಡಲಾಗುತ್ತಿದೆ. ಅಲ್ಲದೇ ಅವರ ಸಂಪೂರ್ಣ ವೈದ್ಯಕೀಯ, ಸಲಕರಣೆ, ಬಸ್ ವೆಚ್ಚವನ್ನು ಭರಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 32 ಮಂದಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಕ್ಷೀರಭಾಗ್ಯ ಹಾಗೂ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ 83,157 ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದಾರೆ. ಇದಕ್ಕಾಗಿ 14.95 ಕೋಟಿ ರೂ.ಬಿಡುಗಡೆಯಾಗಿದ್ದು, 12.21 ಕೋಟಿ ರೂ.ವೆಚ್ಚವಾಗಿದೆ ಎಂದು ಡಾ.ಜಯಮಾಲ ತಿಳಿಸಿದರು.
ಜಿಲ್ಲೆಯ ಅಡಿಕೆ ಕೊಳೆರೋಗದಿಂದ ಹಾನಿಯಾಗಿರುವ ತೋಟಗಳಿಗೆ ಸರಕಾರ 4.29 ಕೋಟಿ ರೂ.ಬಿಡುಗಡೆ ಮಾಡಿದ್ದು, ಇದರಿಂದ 6290 ರೈತರಿಗೆ ಪರಿಹಾರ ವಿತರಿಸಲಾಗಿದೆ. ಉಡುಪಿ ನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಮಾಡಲು ವಾರಾಹಿ ನದಿಯ ನೀರನ್ನು ಬಜೆ ಅಣೆಕಟ್ಟಿಗೆ ತರಲು ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ 6 ಮಂದಿ ಸರಕಾರಿ ನೌಕರರಿಗೆ, ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಬಾಗವಹಿಸಿದ 17 ಕ್ರೀಡಾಪಟುಗಳಿಗೆ, ಪ್ರವಾಹ ಪರಿಸ್ಥಿತಿ ಸಂದರ್ದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಅಗ್ನಿಶಾಮಕ ಇಲಾಖೆಯ 15 ಮಂದಿ ಅಧಿಕಾರಿ/ಸಿಬ್ಬಂದಿಗಳಿಗೆ ಮತ್ತು ಪಥ ಸಂಚಲನದಲ್ಲಿ ಭಾಗವಹಿಸಿ ಉತ್ತಮ ನಿರ್ವಹಣೆ ತೋರಿದ ತಂಡಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.
ನಗರದ ಆಸುಪಾಸಿನ ಐದು ಶಾಲಾ ಮಕ್ಕಳಿಂದ ಆಕರ್ಷಕ, ವರ್ಣರಂಜಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ದಳ ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿ ಗಳಿಂದ ಆಕರ್ಷಕ ಪಥ ಸಂಚಲನವೂ ನಡೆಯಿತು.
ಶಾಸಕ ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ಬಿ. ರೂಪೇಶ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬ. ನಿಂಬರಗಿ, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಎಎಸ್ಪಿ ಕುಮಾರಚಂದ್ರ, ನಗರಸಭೆ ಆಯುಕ್ತ ಆನಂದ್ ಸಿ.ಕಲ್ಲೋಳಿಕರ್, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಪತ್ರಕರ್ತ ಆನಂದ ಅಮ್ಮೆಂಬಳ ಉಪಸ್ಥಿತರಿದ್ದರು.














