ಸಂವಿಧಾನದ ಆಶಯದಂತೆ ಕಾಂಗ್ರೆಸ್ ಕೆಲಸ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜ. 26: ದೇಶಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿಕೊಟ್ಟ ಸಂವಿಧಾನದ ಆಶಯದಂತೆ ಕಾಂಗ್ರೆಸ್ ಪಕ್ಷವು ಕೆಲಸ ಮಾಡುತ್ತಿದೆ. ಜಾತ್ಯತೀತ, ಸಹಬಾಳ್ವೆಯಲ್ಲಿ ನಾವು ನಂಬಿಕೆ ಇರಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ ಬಂದಾಗ ಆಹಾರಕ್ಕೂ ಹಾಹಾಕಾರವಿತ್ತು. ಕಾಂಗ್ರೆಸ್ ನೇತೃತ್ವದ ಸರಕಾರಗಳು ದೇಶವನ್ನು ಆಹಾರದಲ್ಲಿ ಸ್ವಾವಲಂಬಿಯನ್ನಾಗಿಸಿದವು. ವಿವಿಧತೆಯಲ್ಲಿ ಏಕತೆಯನ್ನು ಕಾಪಾಡುವ ಮೂಲಕ, ಬಹು ಸಂಸ್ಕೃತಿಗಳು, ಆಚಾರ-ವಿಚಾರಗಳನ್ನೆ ನಮ್ಮ ಶಕ್ತಿಯನ್ನಾಗಿ ಮಾಡಲಾಯಿತು ಎಂದು ಅವರು ಹೇಳಿದರು.
ಜಾತ್ಯತೀತ ತತ್ವದ ವಿರುದ್ಧ ಕೆಲವರು ನಡೆದುಕೊಳ್ಳುತ್ತಿದ್ದಾರೆ. ವಿಶ್ವಕ್ಕೆ ಮಾದರಿಯಾಗಿರುವ ನಮ್ಮ ಸಂವಿಧಾನವನ್ನು ಒಪ್ಪಿಕೊಂಡು 69 ವರ್ಷ ಕಳೆದಿದ್ದು, 70ನೇ ವರ್ಷಕ್ಕೆ ಕಾಲಿರಿಸಿದ್ದೇವೆ. ಅಂತಹ ಸಂವಿಧಾನವನ್ನು ಸುಡುವಂತಹ ಪ್ರಯತ್ನಗಳು ನಡೆದಿರುವುದು ದುರಾದೃಷ್ಟಕರ ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಬೇಕೆಂದು ನಮ್ಮ ಸರಕಾರದ ಅವಧಿಯಲ್ಲಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಗೆ ಭಾರತ ರತ್ನ ಕೊಟ್ಟಿರುವುದು ಸ್ವಾಗತಾರ್ಹ. ಶ್ರೀಗಳ ಪಾರ್ಥಿವ ಶರೀರದ ಮುಂದೆ ದಿನವಿಡಿ ಕೂರುವುದು ಗೌರವ ಅಲ್ಲ, ಅವರ ಸೇವೆಯನ್ನು ಪರಿಗಣಿಸಿ ಭಾರತ ರತ್ನ ಕೊಟ್ಟಿದ್ದರೆ ಆ ಪ್ರಶಸ್ತಿಯ ಮೌಲ್ಯ ಹೆಚ್ಚುತ್ತಿತ್ತು. ಎಂದು ಅವರು ತಿಳಿಸಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಂವಿಧಾನದ ಆಶೋತ್ತರಗಳಂತೆ ದೇಶದ ಜನ ಮುಂದೆ ಸಾಗಬೇಕಿದೆ. ಜಾತ್ಯತೀತ, ಸಹಬಾಳ್ವೆ, ಸಹೋದರತೆಯನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರವು ಸಂವಿಧಾನ ವಿರೋಧಿ ಕಾರ್ಯಗಳಲ್ಲಿ ತೊಡಗಿದೆ. ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು, ಅವರ ಧ್ವನಿ ಅಡಗಿಸಲು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷವು ಇದಕ್ಕೆ ಅವಕಾಶ ಮಾಡಿ ಕೊಡಬಾರದು. ಈ ಜನ ವಿರೋಧಿ ಸರಕಾರವನ್ನ ಬದಲಿಸಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದು, ಹೊಸ ಭಾರತದ ಕನಸನ್ನ ಸಾಕಾರಗೊಳಿಸಬೇಕಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಚ್.ಆಂಜನೇಯ, ಎಚ್.ಎಂ.ರೇವಣ್ಣ, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಘೋರ್ಪಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಿಎಂ ಹೇಳಿಕೆ ನಿಜ
ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಮಿಷವೊಡ್ಡುತ್ತಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಸತ್ಯ. ಬಿಜೆಪಿಯವರು ಹಡಬಿಟ್ಟಿ ದುಡ್ಡಿನಿಂದ ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಬಿಜೆಪಿಯವರ ಆಪರೇಷನ್ ಕಮಲ ಯಶಸ್ವಿಯಾಗುವುದಿಲ್ಲ.
ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ






.jpg)
.jpg)

