ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ತಪ್ಪಿರುವುದು ರಾಜ್ಯದ ಜನತೆಗೆ ನೋವಾಗಿದೆ: ವೆಂಕಟರಾವ್ ನಾಡಗೌಡ
ರಾಯಚೂರು, ಜ.26: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡದಿರುವುದು ನನ್ನನ್ನೂ ಒಳಗೊಂಡಂತೆ ನಾಡಿನ ಜನತೆಗೆ ನೋವಾಗಿದೆ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿದ ಬಳಿಕ ಮಾತನಾಡಿದ ಅವರು, ಶ್ರೀಗಳಿಗೆ ಭಾರತ ರತ್ನ ನೀಡಿದ್ದರೆ, ಆ ಪ್ರಶಸ್ತಿಯ ವೌಲ್ಯ ಹೆಚ್ಚಾಗುತ್ತಿತ್ತು ಎಂದು ತಿಳಿಸಿದರು.
ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ, ಪ್ರಶಸ್ತಿ ಕೊಡುವ ನಿರೀಕ್ಷೆ ಇತ್ತು. ಆದರೆ, ಬಿಜೆಪಿ ನಾಯಕರು ಪ್ರಧಾನಿ ಮೇಲೆ ಒತ್ತಡ ಹಾಕುವಲ್ಲಿ ಸೋತಿದ್ದಾರೆ. ಶ್ರೀಗಳಿಗೆ ಭಾರತ ರತ್ನ ನೀಡದಿರುವುದು ಇಡೀ ಕರ್ನಾಟಕಕ್ಕೆ ನೋವಾಗಿದೆ ಎಂದು ಅವರು ಹೇಳಿದರು.
ಮೀನುಗಾರರ ನಾಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಎಲ್ಲ ರೀತಿಯ ಶೋಧ ಮಾಡಿದ್ದೇವೆ. ಮಹಾರಾಷ್ಟ್ರದಲ್ಲಿ ಘಟನೆ ನಡೆದಿರುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ನಾನು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದೇವೆ. ನೌಕಾದಳ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಕೆಲವು ಬೋಟ್‌ನ ಅವಶೇಷಗಳು ಸಿಕ್ಕಿವೆ. ಈ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.





