ಉಡುಪಿ: ರಾಜಗಾಂಭೀರ್ಯದಿಂದ ನಡೆದು ಬಂದ ‘ಚಾಂಪಿಯನ್ ಸುಲ್ತಾನ್’
ಮುಹಮ್ಮದ್ ಇರ್ಷಾದ್ ಅಬಿದಿನ್ ಮನೆಯಲ್ಲಿ ಸಾಕುತ್ತಿರುವ ಓಂಗೋಲ್ ಗೋತಳಿ

ಉಡುಪಿ, ಜ.26: ಇತ್ತೀಚೆಗೆ ರಾಯಚೂರಿನ ಸಿಂಧನೂರಿನಲ್ಲಿ ನಡೆದ ರಾಜ್ಯ ಮಟ್ಟದ ಪಶು ಮೇಳದಲ್ಲಿ ‘ಚಾಂಪಿಯನ್’ ಪಟ್ಟವನ್ನು ಪಡೆದ ಬ್ರಹ್ಮಾವರ ಉಪ್ಪಿನಕೋಟೆಯ ಮುಹಮ್ಮದ್ ಇರ್ಷಾದ್ ಅಬಿದಿನ್ ಅವರ ಆಂಧ್ರ ಪ್ರದೇಶದ ಓಂಗೋಲ್ ಗೋತಳಿಯ ಎತ್ತು ‘ಸುಲ್ತಾನ್’, ಇಂದು ಬೀಡಿನಗುಡ್ಡೆ ಮಹಾತ್ಮಗಾಂಧಿ ಬಯಲು ರಂಗಮಂದಿರ ಮೈದಾನದಲ್ಲಿ ರಾಜಗಾಂಭೀರ್ಯದ ನಡೆಯೊಂದಿಗೆ ಸಚಿವ ಜಯಮಾಲ ಸೇರಿದಂತೆ ನೆರೆದಿದ್ದ ಗಣ್ಯರ ಎದುರು ನಡೆದು ಬಂದು ಎಲ್ಲರ ಗಮನ ಸೆಳೆಯಿತು.
ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಈತ ಸಾಗಬೇಕಾಗಿದ್ದರೂ ‘ಸಿದ್ಧ’ನಾಗದ ಕಾರಣ, ಪರೇಡ್ ಮುಗಿದ ಬಳಿಕ ರಾಷ್ಟ್ರಧ್ವಜ ಹಿಡಿದ ಮಾಲಕರೊಂದಿಗೆ ತಾನು ಗೆದ್ದ ಟ್ರೋಫಿ ಸಹಿತ ಕುಳಿತ ಬಾಲಕನನ್ನು ಹೊತ್ತು ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ಸಾಗಿಬಂದ ಆತನ ‘ಭವ್ಯತೆ’ಯನ್ನು ಎಲ್ಲರೂ ಬೆರಗುಗಣ್ಣಿನಿಂದ ನೋಡಿದರು.
ಉಪ್ಪಿನಕೋಟೆಯಲ್ಲಿ ಕಳೆದ ಹಲವು ವರ್ಷಗಳಿಂದ ಕೃಷಿಯೊಂದಿಗೆ ಹೈನುಗಾರಿಕೆ ನಡೆಸುತ್ತಿರುವ ಮುಹಮ್ಮದ್ ಇರ್ಷಾದ್ ಅಬಿದಿನ್, ಮನೆಯಲ್ಲಿ ಸಾಕುತ್ತಿರುವ ಆಂಧ್ರಪ್ರದೇಶ ಮೂಲದ ಓಂಗೋಲ್ ಗೋತಳಿಯ ‘ಸುಲ್ತಾನ್’ ಹೋದಲ್ಲೆಲ್ಲಾ ನೋಡುಗರ ಗಮನ ಸೆಳೆಯುತ್ತಿದೆ. ಅಬಿದಿನ್‌ರಲ್ಲಿ 20ಕ್ಕೂ ಅಧಿಕ ದೇಶಿಯ ಗೋತಳಿಗಳಿವೆ. ಇದರಲ್ಲಿ ಸುಲ್ತಾನ್ ಎಲ್ಲ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಸುಮಾರು ಏಳು ವರ್ಷ ಪ್ರಾಯದ ಸುಲ್ತಾನ್ ಸುಮಾರು 6.2 ಅಡಿ ಎತ್ತರವಿದ್ದು, ಅಂದಾಜು 1,450 ಕೆ.ಜಿ. ತೂಗುತ್ತಿದೆ. ಇದನ್ನು 3.7 ಲಕ್ಷ ರೂ.ಗೆ ಅವರು ಆಂಧ್ರಪ್ರದೇಶದಿಂದ ಖರೀದಿಸಿ ತಂದಿದ್ದಾರೆ. ಗೋಸಾಕಣೆಯಲ್ಲಿ ತೊಡಗಿಸಿಕೊಂಡಿರುವ ಅಬಿದಿನ್‌ರಲ್ಲಿ 12 ಗುಜರಾತಿನ ಗೀರು ತಳಿಗಳು ಕೂಡ ಇವೆ.
ಇಂದಿಲ್ಲಿ ಆತ ತನ್ನ ಗಂಭೀರ, ಆದರೆ ಸೌಮ್ಯ ಸ್ವಭಾವದೊಂದಿಗೆ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆದಿದ್ದು, ಶಾಲಾ ಮಕ್ಕಳು, ಪೊಲೀಸ್ ಅಧಿಕಾರಿಗಳು, ಸರಕಾರಿ ಅಧಿಕಾರಿಗಳು ಆತನೊಂದಿಗೆ ನಿಂತು ಸೆಲ್ಫಿ ಕ್ಲಿಕ್ಲಿಸಿಕೊಳ್ಳುವಲ್ಲಿ ಪೈಪೋಟಿ ನಡೆಸಿ ಖುಷಿಪಟ್ಟರು.








