ತುಂಬೆ ಕುಟುಂಬದಿಂದ ವೆನ್ಲಾಕ್ ಆಸ್ಪತ್ರೆಯ ರೋಗಿಗಳಿಗೆ ಅನ್ನದಾನ

ಮಂಗಳೂರು, ಜ.26: ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ರಾಜ್ಯದ ವಿವಿಧೆಡೆಯ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ರೋಗಿಗಳ ಜೊತೆಗಾರರಿಗೆ ಊಟೋಪಚಾರಕ್ಕಾಗಿ ಹಲವಾರು ಸಂಘ ಸಂಸ್ಥೆಗಳು ಅನ್ನದಾನ ಮಾಡುತ್ತಿದ್ದು, ಶುಕ್ರವಾರ ನಡೆದ ಅನ್ನದಾನ ಕಾರ್ಯಕ್ರಮವನ್ನು ತುಂಬೆ ಕುಟುಂಬ ನೆರವೇರಿಸಿತು.
ವೆನ್ಲಾಕ್ ಆಸ್ಪತ್ರೆಗೆ ದಾಖಲಾಗುವ ಬಹುತೇಕ ಮಂದಿ ಕಡು ಬಡವರಾಗಿದ್ದು, ಶುಕ್ರವಾರ ದಿನದ ಅನ್ನದಾನದ ಪ್ರಾಯೋಜಕತ್ವವನ್ನು ಎ.ಎಚ್.ತುಂಬೆಯವರ ಪುತ್ರಿ ಶಮೀಲ್ ತುಂಬೆ ವಹಿಸಿದ್ದರು. ಸಂಜೆ 6 ಗಂಟೆಗೆ ಪ್ರತಿಯೊಬ್ಬರಿಗೆ ಮೂರು ಇಡ್ಲಿ, ತರಕಾರಿ ಪದಾರ್ಥ, ಸಾಂಬಾರ್ ನೀಡಲಾಯಿತು.
‘ವಾರ್ತಾಭಾರತಿ’ಯ ಲೈಸನ್ ಆಫೀಸರ್ ಎ.ಎಚ್.ತುಂಬೆ ಮಾತನಾಡಿ, ಬಡವರ ಸೇವೆ ಹಾಗೂ ದಾನ ನೀಡುವುದು ಇಸ್ಲಾಂ ನಮಗೆ ಕಲಿಸಿಕೊಟ್ಟಿದೆ. ದೇವರ ಸಂಪ್ರೀತಿಗಾಗಿ ಅನ್ನದಾನ ಸೇವೆಯು ಹೆಚ್ಚಿನ ಮಹತ್ವ ಪಡೆದಿದೆ. ಎಂ-ಫ್ರೆಂಡ್ಸ್‌ನಂತಹ ಸಂಘ ಸಂಸ್ಥೆಗಳು ಇಂತಹ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕರಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಶಮೀಲ್ ತುಂಬೆ ಮಾತನಾಡಿ, ಪ್ರತಿವರ್ಷವೂ ತಮ್ಮ ಕುಟುಂಬದಿಂದ ಮನೆಯಲ್ಲಿ ಇಂತಹ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ನೆರೆಕರೆಯ ಬಡಜನರಿಗೆ ಅನ್ನದಾನ ಏರ್ಪಡಿಸುತ್ತೇವೆ. ಇಂದು ಬಡ ರೋಗಿಗಳಿಗೆ ಊಟೋಪಚಾರ ನೀಡಿ ಧನ್ಯರಾಗಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಕೀಲ್ ತುಂಬೆ, ಝೈನಾ ಎ. ತುಂಬೆ, ಮುಹಮ್ಮದ್ ಫರ್ಹಾನ್ ತುಂಬೆ, ಮಸೂದ ಎಸ್. ತುಂಬೆ ಹಾಗೂ ಎಂ-ಫ್ರೆಂಡ್ಸ್‌ನ ಸದಸ್ಯರಾದ ಆರಿಫ್ ಪಡುಬಿದ್ರಿ, ಇರ್ಶಾದ್ ವೇಣೂರ್, ಮನ್ಸೂರ್ ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು.






.jpeg)
.jpeg)

