ಫೆ. 3: ಬ್ರಹ್ಮಾವರದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಮಹಾ ಸಮಾವೇಶ
ಉಡುಪಿ, ಜ.26: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ಜಿಲ್ಲೆಯ ಸಮಸ್ತ ಬಿಲ್ಲವ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಇದೇ ಫೆ.3ರಂದು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಮಹಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಸಾರಥ್ಯವನ್ನು ವಹಿಸಿರುವ ಬಿಲ್ಲವ ಮುಂದಾಳು ಬಿ.ಎನ್.ಶಂಕರ ಪೂಜಾರಿ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಬಿಲ್ಲವ ಸಮುದಾಯ ಬಹುಸಂಖ್ಯಾತರಾದರೂ, ಸರಕಾರದ ಸೌಲಭ್ಯಗಳನ್ನು ವ್ಯವಸ್ಥಿತ ವಾಗಿ ಪಡೆಯುವಲ್ಲಿ ತೀರಾ ಹಿಂದುಳಿದ ಜನಾಂಗವೆನಿಸಿದೆ. ಈ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ಹಾಗೂ ಸರಕಾರದ ಮುಂದೆ ಸಮುದಾಯದ ಬೇಡಿಕೆಯನ್ನು ಮಂಡಿಸಲು ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದವರು ನುಡಿದರು.
ಪ್ರಸ್ತುತ ಹಿಂದುಳಿದ ವರ್ಗದಲ್ಲಿರುವ ಬಿಲ್ಲವ ಸಮುದಾಯದ ಸುಮಾರು ಶೇ.80ರಷ್ಟು ಮಂದಿ ಇಂದಿಗೂ ಬಡತನದ ರೇಖೆಗಿಂತ ಕೆಳಗೆ ಬದುಕುತ್ತಿರುವುದು ವಾಸ್ತವ. ಇದರಿಂದಾಗಿ ಸಮುದಾಯದ ಮೂಲಭೂತ ಅಗತ್ಯತೆಗಳಾದ ಉನ್ನತ ಶಿಕ್ಷಣ, ಉತ್ತಮ ವಸತಿ, ಉದ್ಯೋಗಾವಕಾಶಗಳಿಂದ ಯುವಕರು ವಂಚಿತರಾಗುತಿದ್ದಾರೆ ಎಂದು ಶಂಕರ ಪೂಜಾರಿ ತಿಳಿಸಿದರು.
ಇಂದು ಬಿಲ್ಲವ ಸಮಾಜ ಸಂಘಟಿತವಾಗಿದೆ. ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಆದರೆ ಸರಕಾರದ ಮೂಲಕ ದೊರೆಯಬಹುದಾದ ವಿಶೇಷ ಸವಲತ್ತುಗಳು ಹಾಗೂ ಯೋಜನೆಗಳು ಸರಿಯಾಗಿ ತಲುಪದ ಕಾರಣ ಬಿಲ್ಲವ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಕುಂಠಿತಗೊಂಡಿದೆ ಎಂದರು.
ಫೆ.3ರ ರವಿವಾರ ಅಪರಾಹ್ನ 2 ರಿಂದ ಸಂಜೆ 5:30ರವರೆಗೆ ನಡೆಯುವ ಈ ಸಮಾವೇಶವನ್ನು ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಕನ್ಯಾಡಿ ಧರ್ಮಸ್ಥಳದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಸದ್ಗುರು ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಕಾರ್ಕಳ ಬೊಲ್ಕೊಟ್ಟು ಸದ್ಗುರುಶ್ರೀವಿಖ್ಯಾತಾನಂದ ಸ್ವಾಮೀಜಿ ೊಸ್ಮಾರು ಆಶೀರ್ವಚನ ನೀಡಲಿದ್ದಾರೆ.
ವಿಶೇಷ ಆಮಂತ್ರಿತರಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ರಾಜ್ಯ ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಹಾಗೂ ಸಮುದಾಯದ ಹಿರಿಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮುಂಬೈ ಸಾಹಿತಿ ಬಾಬು ಶಿವ ಪೂಜಾರಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ಸಮಾವೇಶದಲ್ಲಿ 50,000 ಕ್ಕೂ ಅಧಿಕ ಬಿಲ್ಲವ ಸಮುದಾಯದ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ಜಿಲ್ಲೆಯಾದ್ಯಂತ ಸಮಸ್ತ ಬಿಲ್ಲವ ಸಂಘ-ಸಂಸ್ಥೆಗಳ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ.
ಉಡುಪಿ ಜಿಲ್ಲಾ ಬಿಲ್ಲವ ಮಹಾಸಮಾವೇಶ-2019ರಲ್ಲಿ ಸರಕಾರಕ್ಕೆ ಮೂರು ಪ್ರಮುಖ ಬೇಡಿಕೆಗಳ ಮನವಿಯೊಂದನ್ನು ಸಲ್ಲಿಸಲಾಗುವುದು. ಇವುಗಳಲ್ಲಿ ಬಿಲ್ಲವ ಸಮುದಾಯವನ್ನು ಹಿಂದುಳಿದ ವರ್ಗ ಮೀಸಲಾತಿ ಪ್ರವರ್ಗ 2ಎ ಯಿಂದ ಪ್ರವರ್ಗ-1ಕ್ಕೆ ಬದಲಾಯಿಸಬೇಕು.
ಉಡುಪಿ ಜಿಲ್ಲಾ ಬಿಲ್ಲವ ಮಹಾಸಮಾವೇಶ-2019ರಲ್ಲಿ ಸರಕಾರಕ್ಕೆ ಮೂರು ಪ್ರಮುಖ ಬೇಡಿಕೆಗಳ ಮನವಿಯೊಂದನ್ನು ಸಲ್ಲಿಸಲಾಗುವುದು. ಇವುಗಳಲ್ಲಿ ಬಿಲ್ಲವ ಸಮುದಾಯವನ್ನು ಹಿಂದುಳಿದ ವರ್ಗ ಮೀಸಲಾತಿ ಪ್ರವರ್ಗ 2ಎ ಯಿಂದ ಪ್ರವರ್ಗ-1ಕ್ಕೆ ಬದಲಾಯಿಸಬೇಕು. 2.ಬಿಲ್ಲವ ಸಮುದಾಯದ ಸಮಗ್ರ ಶ್ರೇಯೋಭಿವೃದ್ಧಿಗಾಗಿ ‘ಬ್ರಹ್ಮಶ್ರೀ ನಾರಾಯಣಗುರು ಯೋಜನೆ/ನಿಗಮ’ ಸ್ಥಾಪನೆ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಹಾಗೂ ಬಿಲ್ಲವ ಜನಾಂಗದ ಕುಲಕಸುಬುಗಳಾದ ಕೃಷಿ ಮತ್ತು ಇನ್ನಿತರ ಸ್ವಉದ್ಯೋಗ ಚಟುವಟಿಕೆಗಳಿಗೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಬೇಕು. 3.ಶ್ರೀಬ್ರಹ್ಮಬೈದರು ಗರೋಡಿಗಳ ಅರ್ಚಕರಿಗೆ ಮಾಸಾಶನ ಸೌಲಭ್ಯ ಹಾಗೂ ಸಮಸ್ತ ಗರೋಡಿಗಳ ಪಹಣಿ ಪತ್ರವನ್ನು ಆಯಾ ಗರೋಡಿಗಳ ಹೆಸರಿಗೆ ರ್ಪಾಡುಗೊಳಿಸಬೇಕು.
ಈ ಮೂರು ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಮಾವೇಶದಲ್ಲಿ ಮುಖ್ಯಮಂತ್ರಿಗಳಿಗೆ ಸಮಸ್ತ ಬಿಲ್ಲವ ಸಮುದಾಯದ ಪರವಾಗಿ ಅರ್ಪಿಸಿ ಶೀಘ್ರವೇ ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ಬಿ.ಎನ್.ಶಂಕರ ಪೂಜಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾವೇಶದ ಪ್ರಧಾನ ಸಂಚಾಲಕ ಅಚ್ಯುತ ಅಮೀನ್ ಕಲ್ಮಾಡಿ, ಕಾರ್ಯಾಧ್ಯಕ್ಷ ಪ್ರವೀಣ್ ಎಂ.ಪೂಜಾರಿ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಅಶೋಕ್ ಪೂಜಾರಿ ಹಾರಾಡಿ, ಪ್ರ.ಕಾರ್ಯದರ್ಶಿ ಎ.ಶಿವಕುಮಾರ್ ಅಂಬಲಪಾಡಿ, ಗೌರವ ಕೋಶಾಧಿಕಾರಿ ಎಂ.ಮಹೇಶ್‌ಕುಮಾರ್ ಉಪಸ್ಥಿತ ರಿದ್ದರು.







