ಪ್ರೊ.ವಿ.ಬಿ. ಅರ್ತಿಕಜೆ ಅವರ `ಮಾರ್ದನಿ ಮಾಲೆ' ಕೃತಿ ಬಿಡುಗಡೆ

ಪುತ್ತೂರು, ಜ. 26: ಕಳೆದ ನಾಲ್ಕು ದಶಕಗಳಿಂದ ಅಂಕಣಕಾರರಾಗಿ ಅಕ್ಷರ ಲೋಕದಲ್ಲಿ ಸಾಹಿತ್ಯ ಸೇವೆ ನಡೆಸುತ್ತಿರುವ ಪ್ರೊ. ವಿಬ.ಬಿ. ಅರ್ತಿಕಜೆ ಅವರ ಅಂಕಣ ಬರಹಗಳು ಅನುಭವ ಜನ್ಯವಾಗಿ ಮೂಡಿ ಬಂದಿದೆ. ಅಂಕಣಕಾರರಾಗಿ ಸುದೀರ್ಘ ಅವಧಿಯಲ್ಲಿ ವಿವಿಧ ವಿಷಯಗಳನ್ನು ಓದುಗರ ಮನ ಮುಟ್ಟುವಂತೆ ಪ್ರಸ್ತುತ ಪಡಿಸುವ ಮೂಲಕ ಇವರ ಕೃತಿಗಳು ಪ್ರಸಿದ್ಧಿ ಪಡೆದಿವೆ ಎಂದು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಹೇಳಿದರು.
ಅವರು ಶನಿವಾರ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಲೇಖಕ-ಅಂಕಣಕಾರ ಪ್ರೊ. ವಿ.ಬಿ. ಅರ್ತಿಕಜೆ ಅವರ ಅಂಕಣ ಬರಹಗಳ ಸಂಗ್ರಹ ಮಾರ್ದನಿ-ಮಾಲೆ ಕೃತಿ ಬಿಡುಗಡೆಯ ಸಮಾರಂಭದಲ್ಲಿ ಕೃತಿ ಪರಿಚಯ ಮಾಡಿದರು. ಪ್ರೊ.ವಿ.ಬಿ. ಅರ್ತಿಕಜೆ ಅವರ ಅಂಕಣ ವಸ್ತು-ಶಬ್ದ ಇಷ್ಟವಾಗುತ್ತದೆ. ಸರಳವಾದ ಸಂಗತಿಗಳನ್ನು ಓದುಗರಿಗೆ ತಮ್ಮದೇ ವಿಮರ್ಶೆಯೊಂದಿಗೆ ತಲುಪಿಸುವ ರೀತಿ ವಿಶಿಷ್ಟವಾದದ್ದು ಎಂದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಿ. ಪುರಂದರ ಭಟ್ ಸಾಹಿತ್ಯವು ಮನುಷ್ಯನಿಗೆ ಎದುರಾಗುವ ಎಲ್ಲಾ ಮಾನಸಿಕ ಚಂಚಲತೆಯನ್ನು ಪರಿಹರಿಸುವ ಜನೋಪಯೋಗಿ ಪ್ರಭಾವಿ ಮಾಧ್ಯಮವಾಗಿದೆ. ಪ್ರೊ.ವಿ.ಬಿ. ಅರ್ತಿಕಜೆ ಅವರ ಮನಸ್ಸು ಮತ್ತು ಉದ್ದೇಶ ಅವರ ಕೃತಿಗಳಲ್ಲಿ ಇರುತ್ತದೆ. ಅಂಕಣ ಬರಹಗಾರರಾಗಿ ಅವರು ಆಯ್ಕೆ ಮಾಡದ ವಿಷಯಗಳೇ ವಿರಳ ಎಂದರು.
ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಹಿರಿಯ ಸಾಹಿತಿ, ಪತ್ರಕರ್ತ, ಅನುಭವಿ ಅಂಕಣಕಾರ ಪ್ರೊ.ವಿ.ಬಿ. ಅರ್ತಿಕಜೆ ಅವರು ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಇಂತಹ ಶ್ರೇಷ್ಠ ವ್ಯಕ್ತಿಯು ಬರೆದ ಮಾರ್ದನಿ-ಮಾಲೆ ಕೃತಿಯನ್ನು ಬಿಡುಗಡೆಗೊಳಿಸುವುದು ಒಂದು ಹೆಮ್ಮೆಯ ಸಂಗತಿಯಾಗಿದೆ. ಪುತ್ತೂರು ತಾಲೂಕು ಪತ್ರಕರ್ತರ ಸಂಘವು ಈ ದಿಸೆಯಲ್ಲಿ ಹಿರಿಯ ಪತ್ರಕರ್ತರೊಬ್ಬರ ಪುಸ್ತಕವನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮವನ್ನು ಏರ್ಪಡಿಸಿ ಉತ್ತಮ ಕೆಲಸ ಮಾಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ ಮಾತನಾಡಿ, ನಿತ್ಯ ಧಾವಂತದ ನಡುವೆ ಸಾಹಿತ್ಯದ ಕುರಿತು ಒಲವು ಇದ್ದರೂ ಗಮನ ಹರಿಸಲಾರದ ಒತ್ತಡದಲ್ಲಿ ಪತ್ರಕರ್ತರು ಇರುತ್ತಾರೆ. ಪುತ್ತೂರು ಪತ್ರಕರ್ತರ ಸಂಘವು ಸೃಜನಶೀಲ ಸಂಘವಾಗಿ ಹಿರಿಯ ಅಂಕಣಕಾರ ಪ್ರೊ.ವಿ.ಬಿ. ಅರ್ತಿಕಜೆ ಅವರ ಕೃತಿ ಬಿಡುಗಡೆಯ ಕಾರ್ಯವನ್ನು ಮಾಡಿದೆ. ಇದು ಸಂಘಕ್ಕೆ ಒಂದು ಹೆಮ್ಮೆ ಮತ್ತು ಪತ್ರಕರ್ತರಿಗೆ ಆತ್ಮ ಸಂತೋಷದ ಸಂಗತಿಯಾಗಿದೆ ಎಂದರು.
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಗಣೇಶ್ ಕಲ್ಲರ್ಪೆ ಸ್ವಾಗತಿಸಿ, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ವಂದಿಸಿದರು. ಪತ್ರಕರ್ತ ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು.







