ಸಂವಿಧಾನ ರಚಿಸಿದ ಅಂಬೇಡ್ಕರ್‌ರನ್ನು ನೆನೆಯುವ ದಿನ: ಶಿವಯೋಗಿ ಸಿ.ಕಳಸದ
ಬೆಂಗಳೂರ, ಜ. 26: ಗಣರಾಜ್ಯೋತ್ಸವ ದೇಶದ ಪ್ರತಿಯೊಬ್ಬ ಪ್ರಜೆಯು ಸಂಭ್ರಮದಿಂದ ಆಚರಿಸುವ ರಾಷ್ಟ್ರೀಯ ಹಬ್ಬವಾಗಿದ್ದು, ಸಂವಿಧಾನದ ರಚನೆಗಾಗಿ ಶ್ರಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೆನೆಯುವ ದಿನವೆಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದರು.
ಶನಿವಾರ ಗಣರಾಜ್ಯೋತ್ಸವ ಅಂಗವಾಗಿ ಅಪಘಾತ ರಹಿತ ಮತ್ತು ಅಪರಾಧ ರಹಿತ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ ಮಾಡಿ ಮಾತನಾಡಿದ ಅವರು, ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ಭಾರತದ ಸಂವಿಧಾನವನ್ನು ಗೌರವಿಸಿ, ನಡೆಯುವ ಪ್ರತಿಜ್ಞಾ ಮನೋಭಾವ ಎಲ್ಲರಲ್ಲಿಯೂ ಮೂಡುವಂತಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಮಕ್ಕಳಿಗೆ ನಗದು ಪುರಸ್ಕಾರ ವಿತರಣೆ:
ಎಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ನಿಗಮದ ನೌಕರರ ಮತ್ತು ಅಧಿಕಾರಿಗಳ ಮಕ್ಕಳಿಗೆ 2017-18ನೆ ಸಾಲಿನಿಂದ ನಗದು ಪುರಸ್ಕಾರದ ಮೊತ್ತವನ್ನು ಹೆಚ್ಚಿಸಲಾಗಿದ್ದು, ಗರಿಷ್ಠ 6000ರೂ.ಗಳವರೆಗೆ ನಗದು ಪುರಸ್ಕಾರವನ್ನು ನೀಡಲಾಗುತ್ತದೆ. 2017-18ನೆ ಸಾಲಿನಿಂದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ನೌಕರರ ಮಕ್ಕಳಿಗೂ ಸಹ ನಗದು ಪುರಸ್ಕಾರ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಅದರಂತೆ, 2017-18ನೆ ಸಾಲಿನಲ್ಲಿ ನಿಗಮದ ನೌಕರರು ಮತ್ತು ಅಧಿಕಾರಿಗಳ ಒಟ್ಟು 1,248 ಮಕ್ಕಳಿಗೆ ರೂ.43,77,000 ನಗದು ಪುರಸ್ಕಾರವನ್ನು ವಿತರಿಸಲಾಗಿದೆ.
ಬಸ್ಸಿನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಸುಮಾರು 15 ಲಕ್ಷ ರೂ.ಮೌಲ್ಯದ 699 ಬೆಳ್ಳಿದೀಪಗಳನ್ನು ವಶಪಡಿಸಿಕೊಂಡಿದ್ದ, ಬೆಂಗಳೂರು ಕೇಂದ್ರೀಯ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ತಂಡಕೆ ್ಕಅಭಿನಂದನಾ ಪತ್ರ ಮತ್ತು ನಗದು ಪುರಸ್ಕಾರ ಪ್ರದಾನ ಮಾಡಲಾಯಿತು. ಈ ವೇಳೆ ಕೇಂದ್ರ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.







