ಮಹಿಳೆಗೆ ಅಪರಿಚಿತ ವಾಹನ ಢಿಕ್ಕಿ: ಮೃತದೇಹ ತೋಟಕ್ಕೆ ಎಸೆದು ಪರಾರಿಯಾದ ಚಾಲಕ ?

ಕೋಟ, ಜ.26: ಉಳ್ತೂರು ಎಂಬಲ್ಲಿರುವ ತೋಟದಲ್ಲಿ ಇಂದು ಬೆಳಗ್ಗೆ ಮಹಿಳೆಯೊಬ್ಬರ ಮೃತದೇಹವು ಪತ್ತೆಯಾಗಿದ್ದು, ಅಪಘಾತ ನಡೆಸಿದ ವಾಹನ ಚಾಲಕ ಮೃತದೇಹವನ್ನು ತೋಟದಲ್ಲಿ ಎಸೆದು ಪರಾರಿಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಕುಂಭಾಶಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ನಗರದ ಶಂಕರ ಎಂಬವರ ಪತ್ನಿ ಕರ್ಕು ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿ ಕೊಂಡಿದ್ದ ಇವರು ಕೆಲವು ದಿನ ರಾತ್ರಿ ಮನೆಗೆ ಬರುತ್ತಿರಲಿಲ್ಲ. ಜ. 26ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಉಳ್ತೂರು ಚಂದ್ರಕಾಂತ ಶೆಟ್ಟಿ ಎಂಬವರ ತೆಂಗು ಹಾಗೂ ಅಡಿಕೆ ತೋಟದಲ್ಲಿ ಇವರ ಮೃತದೇಹ ಪತ್ತೆಯಾಯಿತು.
ಮೃತದೇಹದ ತಲೆ, ಕೈಯಲ್ಲಿ ರಕ್ತ ಗಾಯ, ಮೈಮೇಲೆ ತರಚಿದ ಗಾಯ ಗಳಾಗಿದ್ದು, ಮೃತದೇಹ ಪತ್ತೆಯಾದ ಸ್ಥಳದ ಸಮೀಪ ಇರುವ ಕಾಂಕ್ರೀಟ್ ರಸ್ತೆ ಬದಿಯ ನೆಲದ ಮೇಲೂ ರಕ್ತ ಬಿದ್ದಿರುವುದು ಕಂಡು ಬಂದಿದೆ. ತೋಟದ ಮಧ್ಯೆ ಇರುವ ಮಣ್ಣು ರಸ್ತೆಯ ಬದಿಯಲ್ಲಿಯೂ ಮೃತರ ಒಂದು ಜೊತೆ ಚಪ್ಪಲಿ ಹಾಗೂ ರಕ್ತದ ಕಲೆಗಳಿದ್ದವು.
ಕರ್ಕು ಜ. 25ರಂದು ರಾತ್ರಿ 11ಗಂಟೆ ಸುಮಾರಿಗೆ ಮುಖ್ಯ ರಸ್ತೆಯ ಬದಿ ಯಲ್ಲಿ ಕುಳಿತಿರುವುದನ್ನು ಸುಧೀರ್ ಶೆಟ್ಟಿ ಎಂಬವರು ನೋಡಿದ್ದರೆನ್ನಲಾಗಿದೆ. ಹಾಗಾಗಿ ಕರ್ಕು ಅವರಿಗೆ ಯಾವುದೋ ವಾಹನ ಢಿಕ್ಕಿ ಹೊಡೆದಿದ್ದು, ಅದರ ಚಾಲಕ ಅಪರಾಧ ಕೃತ್ಯವನ್ನು ಮರೆ ಮಾಚುವ ಉದ್ದೇಶದಿಂದ ಮೃದೇಹವನ್ನು ಸಮೀಪದ ತೋಟದಲ್ಲಿ ಎಸೆದು ಪರಾರಿಯಾಗಿರಬಹುದೆಂದು ಶಂಕಿಸಲಾಗಿದೆ.
ಈ ಕೃತ್ಯವು ರಾತ್ರಿ 11 ಗಂಟೆಯಿಂದ ಬೆಳಗ್ಗೆ ಮಧ್ಯಾವಧಿಯಲ್ಲಿ ನಡೆದಿರಬಹುದು ಅಥವಾ ಬೇರೆ ಯಾವುದೋ ರೀತಿಯಲ್ಲಿ ಮೃತಪಟ್ಟಿರಬಹುದು ಎಂದು ಮೃತರ ಮಗ ಶರತ್ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.







