ಉಪ್ಪಿನಂಗಡಿಗೆ ಬಸ್ಸು ನಿಲ್ದಾಣ , ಡಿಪ್ಪೋ ನಿರ್ಮಾಣಕ್ಕೆ ಪ್ರಯತ್ನ-ಸಂಜೀವ ಮಠಂದೂರು
ಕೆಸ್ಸಾರ್ಟಿಸಿ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣಾ ಸಮಾರಂಭ

ಪುತ್ತೂರು, ಜ. 26: ತಾಲೂಕಿನ 2ನೇ ದೊಡ್ಡ ಪಟ್ಟಣವಾಗಿರುವ ಹಾಗೂ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಉಪ್ಪಿನಂಗಡಿಗೆ ಆಧುನಿಕ ಬಸ್ ನಿಲ್ದಾಣ ಹಾಗೂ ಡಿಪ್ಪೋ ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗುವುದು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಶನಿವಾರ ಮುಕ್ರಂಪಾಡಿಯಲ್ಲಿರುವ ಕೆಎಸ್‍ಆರ್‍ಟಿಸಿ ವಿಭಾಗೀಯ ಕಾರ್ಯಾಗಾರದಲ್ಲಿ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಿಸಿ ಮಾತನಾಡಿದರು.
ಆರ್. ಅಶೋಕ್ ಸಾರಿಗೆ ಸಚಿವರಾಗಿದ್ದ ಸಮಯದಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಪಿಪಿಪಿ ಯೋಜನೆಯ ಮೂಲಕ ಹೈಟೆಕ್ ಬಸ್ ನಿಲ್ದಾಣ ಮಂಜೂರು ಗೊಂಡಿದೆ. ಸಾರಿಗೆ ನಿಗಮದ ಎಲ್ಲಾ ಕಾರ್ಯಗಳನ್ನು ಮನಗಂಡು ಪುತ್ತೂರಿಗೆ ವಿಭಾಗೀಯ ಕಚೇರಿಯೂ ಸಹ ನಿರ್ಮಾಣಗೊಂಡಿದೆ. ಇದೇ ಸಂದರ್ಭದಲ್ಲಿ ಉಪ್ಪಿನಂಗಡಿಯ ಬಸ್ ನಿಲ್ದಾಣಕ್ಕೆ ಪ್ರಯತ್ನಿಸಲಾಗಿತ್ತು. ಎರಡನೇ ಡಿಪ್ಪೋ ನಿರ್ಮಾಣ ಹಾಗೂ ಬಸ್ ನಿಲ್ದಾಣಕ್ಕೆ ರೂ. 4ಕೋಟಿ ಅನುದಾನ ಬಿಡುಗಡೆ ಯಾಗಿ, ರೂ. 70ಸಾವಿರ ಭೂ ಸ್ವಾಧೀನಕ್ಕೆ ಸಹಾಯಕ ಆಯುಕ್ತ ಖಾತೆಗೆ ಜಮೆಯಾಗಿತ್ತು. ಇದೇ ವೇಳೆಗೆ ಸರಕಾರದ ಅವಧಿ ಪೂರ್ಣಗೊಂಡಿದ್ದು, ಆ ಕೆಲಸ ಅರ್ಧಕ್ಕೇ ನಿಲ್ಲುವಂತಾಯಿತು. ನಂತರ ಬಂದ ಸರಕಾರ ಅದನ್ನು ಕೈಬಿಟ್ಟಿದೆ. ಆದ್ದರಿಂದ ಅದು ಅಲ್ಲಿಗೆ ನಿಂತುಹೋಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಭಾ ಪುರಸ್ಕಾರ ವಿತರಿಸಿದ ಸಹಾಯಕ ಆಯುಕ್ತ ಎಚ್.ಕೆ ಕೃಷ್ಣಮೂರ್ತಿ ಮಾತನಾಡಿ ಪುತ್ತೂರು ಉಪ ವಿಭಾಗದಲ್ಲಿ ನಾನು ಎರಡು ಬಾರಿ ಸಹಾಯಕ ಆಯಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇತರ ಇಲಾಖೆಗಳಂತೆ ಕೆಎಸ್‍ಆರ್‍ಟಿಸಿ ಇಲಾಖೆಯ ವಿರುದ್ಧ ಯಾವುದೇ ದೂರುಗಳು ಬಂದಿರುವುದಿಲ್ಲ. ಇಲಾಖೆಯ ಕೆಲಸ ನಿರ್ವಹಣೆ ಉತ್ತಮವಾಗಿ ನಡೆಯುತ್ತಿದೆ. ಇದರ ಪರಿಣಾಮವಾಗಿ ಜನರಿಗೆ ಉತ್ತಮ ಸೇವೆ ದೊರೆಯುತ್ತಿದೆ ಎಂಬುವುದು ಸಾಬೀತಾಗಿದೆ. ಎಲ್ಲರೂ ಬದ್ಧತೆಯಿಂದ ಕೆಲಸ ಮಾಡಿದಾಗ ಸಂಸ್ಥೆ ಉತ್ತಮವಾಗಿ ಬೆಳೆಯುತ್ತದೆ ಎಂದರು.
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕ ನರೇಂದ್ರ ರೈ ದೇರ್ಲ ಅತಿಥಿಯಾಗಿ ಮಾತನಾಡಿದರು. ನಿವೃತ್ತ ಸಂಚಲಣಾಧಿಕಾರಿ ಎನ್.ಕೆ ಭಟ್, ಅಧ್ಯಕ್ಷತೆ ವಹಿಸಿದ್ದರು. ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್ ಎಲ್. ಶಿರಾಲಿ ಶುಭಹಾರೈಸಿದರು.
ಈ ಸಂದರ್ಭ ನಿರಂತರ 5 ವರ್ಷಗಳ ಸೇವಾ ಅವಧಿಯಲ್ಲಿ ಅಪಘಾತ ರಹಿತ ಚಾಲನೆ ಮಾಡಿದ 15 ಚಾಲಕರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು. ಪುತ್ತೂರು ಘಟಕದ ಸೀತಾರಾಮ ಕೈಯಾಡಿ, ಅಪ್ಪು ನಾಯ್ಕ, ಹೆನ್ರಿ ಗಲ್ಬಾವೋ , ಡೊಂಬಯ್ಯ, ಬಿ.ಸಿ ರೋಡ್ ಘಟಕದ ರಾಮ ಪಲಿಮಾರು, ಸುಳ್ಯ ಘಟಕದ ಶೀನ ನಾಯ್ಕ, ಮಡಿಕೇರಿ ಘಟಕದ ಯು.ಸಿ. ಕಾರ್ಯಪ್ಪ, ಮಾರ್ಷಲ್ ರೋಡ್ರಿಗಸ್, ಕೆ.ಪಿ. ದಿನೇಶ ಕಾಕೇರಿ, ಸಂತೋಷ ಹವಿನಾಳ, ಪಾಪು ಶಿವಾಯಗೋಳ, ಧರ್ಮಸ್ಥಳ ಘಟಕದ ಆನಂದ ಮೂಲ್ಯ, ಎಸ್.ವಿ. ಬಸವರಾಜು, ಕಲ್ಲಪ್ಪ ಕಾಂಬ್ಳೆ, ನಾರಾಯಣ ಪೂಜಾರಿ ಅವರಿಗೆ ಶಾಸಕ ಸಂಜೀವ ಮಠಂದೂರು ಬೆಳ್ಳಿ ಪದಕ ಪ್ರಧಾನ ಮಾಡಿದರು.
ಇಂಧನ ಉಳಿತಾಯದಲ್ಲಿ ಪುತ್ತೂರು ಘಟಕ, ಗರಿಷ್ಠ ಆದಾಯ ಗಳಿಕೆಯಲ್ಲಿ ಧರ್ಮಸ್ಥಳ ಘಟಕ, ಕಡಿಮೆ ನಷ್ಟಕ್ಕೆ ಸುಳ್ಯ ಘಟಕ, ಅತೀ ಕಡಿಮೆ ಅಪಘಾತಕ್ಕೆ ಮಡಿಕೇರಿ ಘಟಕ ಹಾಗೂ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಬಿ.ಸಿರೋಡ್ ಘಟಕಗಳಿಗೆ ನೀಡಿ ಗೌರವಿಸಲಾಯಿತು.
ವಿಭಾಗದ ಅಧಿಕಾರಿ ಹಾಗೂ ಸಿಬಂದಿಗಳ ಮಕ್ಕಳಿಗೆ, ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆಗೊಸ್ಕರ ಒಟ್ಟು 90 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರೂ. 3.15ಲಕ್ಷ ವೆಚ್ಚದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೇ ವಿಭಾಗದ ಸಿಬಂದಿ ಹಾಗೂ ಅಧಿಕಾರಿಗಳಿಗೆ ನಡೆಸಿದ ವಿವಿಧ ಕ್ರೀಡೆ, ಸಾಂಸ್ಕøತಿಕ ಹಾಗೂ ಕಲಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
ಶಾಸಕ ಸಂಜೀವ ಮಠಂದೂರು ಅವರನ್ನು ವಿಭಾಗದ ವತಿಯಿಂದ ಸನ್ಮಾನಿಸಲಾಯಿತು. ಅಲ್ಲದೇ ವಿವಿಧ ಕಾರ್ಮಿಕ ಸಂಘಟನೆಗಳಿಂದಲೂ ಶಾಸಕರನ್ನು ಸನ್ಮಾನಿಸಲಾಯಿತು.
ಉಪಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ದಿವಾಕರ ಎಚ್. ಸ್ವಾಗತಿಸಿ, ವಿಭಾಗೀಯ ಸಂಚಲನಾಧಿಕಾರಿ ಮುರಳೀಧರ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಭಾಗೀಯ ಯಾಂತ್ರಿಕ ಅಭಿಯಂತರ ವೇಣುಗೋಪಾಲ ವಂದಿಸಿದರು. ರಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







