ರಣಜಿ ಸೆಮಿಫೈನಲ್: ಕರ್ನಾಟಕಕ್ಕೆ ಮುನ್ನಡೆ
► ಶ್ರೇಯಸ್ ಅಜೇಯ ಅರ್ಧಶತಕ ► ದ್ವಿತೀಯ ಇನಿಂಗ್ಸ್ 237/8

ಬೆಂಗಳೂರು, ಜ.26: ಆಲ್‌ರೌಂಡರ್ ಶ್ರೇಯಸ್ ಗೋಪಾಲ್‌ರ ಅಜೇಯ ಅರ್ಧಶತಕ, ಮಾಯಾಂಕ್ ಅಗರ್ವಾಲ್ ಹಾಗೂ ಅಭಿಮನ್ಯು ಮಿಥುನ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ ನಡೆಯುತ್ತಿರುವ ರಣಜಿ ಸೆಮಿಫೈನಲ್ ಪಂದ್ಯದ ತನ್ನ ಎರಡನೇ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 237 ರನ್ ಗಳಿಸಿದೆ. ಇದರಿಂದ ಪ್ರಥಮ ಇನಿಂಗ್ಸ್‌ನಲ್ಲಿ ದೊರೆತ 39 ರನ್‌ಗಳೊಂದಿಗೆ ಒಟ್ಟು 276 ರನ್ ಮುನ್ನಡೆ ಸಾಧಿಸಿ ಉತ್ತಮ ಸ್ಥಿತಿಯಲ್ಲಿದೆ. ಇದಕ್ಕೂ ಮೊದಲು ರೋನಿತ್ ಮೋರೆ ದಾಳಿಗೆ ತತ್ತರಿಸಿದ ಸೌರಾಷ್ಟ್ರ ತಂಡ ಪ್ರಥಮ ಇನಿಂಗ್ಸ್ ನಲ್ಲಿ 236 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಇಲ್ಲಿಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ ಸೌರಾಷ್ಟ್ರ ತಂಡ 7 ವಿಕೆಟ್‌ಗೆ 227ರಿಂದ ತನ್ನ ಪ್ರಥಮ ಇನಿಂಗ್ಸ್ ಮುಂದುವರಿಸಿತು. ಈ ಮೊತ್ತಕ್ಕೆ ಇಂದು 9 ರನ್ ಸೇರಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಒಪ್ಪಿಸಿತು. ಎರಡನೇ ದಿನ ಕ್ರೀಸ್ ಕಾಯ್ದುಕೊಂಡಿದ್ದ ವಸವದಾ(30) ವೇಗಿ ಮೋರೆಗೆ ಶನಿವಾರ ಮೊದಲ ಬಲಿಯಾದರು. ಧರ್ಮೇಂದ್ರ(3) ಹಾಗೂ ನಾಯಕ ಜೈದೇವ್ ಉನಾದ್ಕತ್(0) ಅವರು ಮಿಥುನ್‌ಗೆ ತಮ್ಮ ವಿಕೆಟ್‌ಗಳನ್ನು ಒಪ್ಪಿಸಿದರು. ಪ್ರವಾಸಿಗರ ಬ್ಯಾಟಿಂಗ್ ಬೆನ್ನೆಲುಬು ಮುರಿದ ಮೋರೆ ಒಟ್ಟು 6 ವಿಕೆಟ್‌ಗಳನ್ನು ಪಡೆದರೆ, ಅವರಿಗೆ ಉತ್ತಮ ಸಾಥ್ ನೀಡಿದ ಮಿಥುನ್ 3 ವಿಕೆಟ್ ಕಬಳಿಸಿದರು. ಶ್ರೇಯಸ್‌ಗೆ ಒಂದು ವಿಕೆಟ್ ದಕ್ಕಿತು.
ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ದೊರೆತ ಖುಷಿಯಲ್ಲಿ ತನ್ನ ಎರಡನೇ ಸರದಿಯ ಬ್ಯಾಟಿಂಗ್ ಆರಂಭಿಸಿದ ಪಾಂಡೆ ಬಳಗಕ್ಕೆ ಉನಾದ್ಕತ್ ಆರಂಭದಲ್ಲೇ ಕಾಡಿದರು. ಆರ್.ಸಮರ್ಥ್(5) ಅವರು ಉನಾದ್ಕತ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಈ ವೇಳೆ ತಂಡದ ಕೈಹಿಡಿದ ರಾಷ್ಟ್ರೀಯ ತಂಡದ ಆಟಗಾರ ಮಾಯಾಂಕ್ (46) ಉತ್ತಮ ಜೊತೆಯಾಟಗಳನ್ನು ಬೆಳೆಸಿದರು. ತಂಡದ ಮೊತ್ತ 26 ರನ್ ಆಗಿದ್ದಾಗ ಕೆ.ಸಿದ್ಧಾರ್ಥ್(8) ವಿಕೆಟ್ ಕೈಚೆಲ್ಲಿದರು. ಕರುಣ್ ನಾಯರ್(15) ಮಿಂಚಲು ವಿಫಲರಾದರು. ನಾಯಕ ಮನೀಷ್ ಪಾಂಡೆ (26) ಆರಂಭದಲ್ಲಿ ಉತ್ತಮ ಆಟವಾಡಿದರೂ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು.
ತಂಡದ ಮೊತ್ತ 108 ರನ್ ಆಗಿದ್ದಾಗ ಮಾಯಾಂಕ್ 5ನೆಯವರಾಗಿ ಔಟಾದರು. ಈ ಹಂತದಲ್ಲಿ ಬ್ಯಾಟಿಂಗ್ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಆಲ್‌ರೌಂಡರ್ ಶ್ರೇಯಸ್ ಗೋಪಾಲ್(ಅಜೇಯ 61) ಕರುನಾಡ ತಂಡಕ್ಕೆ ಆಸರೆ ಒದಗಿಸಿದ್ದಾರೆ. ಪ್ರಥಮ ಇನಿಂಗ್ಸ್ ಹೀರೊ ವಿಕೆಟ್ ಕೀಪರ್ ಶರತ್(7), ವಿನಯಕುಮಾರ್ ಹಾಗೂ ಕೆ.ಗೌತಮ್ (11) ವಿಕೆಟ್‌ಗಳು ಅತ್ಯಲ್ಪ ಕಾಲದಲ್ಲಿ ಉರುಳಿದವು. ಮುರಿಯದ 9ನೇ ವಿಕೆಟ್ ಜೊತೆಯಾಟದಲ್ಲಿ ಶ್ರೇಯಸ್ ಹಾಗೂ ಮಿಥುನ್(35) 61 ರನ್ ಸೇರಿಸಿ ತಂಡದ ಒಟ್ಟು ಮುನ್ನಡೆಯನ್ನು 250ರ ಗಡಿ ದಾಟಿಸಿದ್ದಾರೆ.
ಸೌರಾಷ್ಟ್ರ ಪರ ಉನಾದ್ಕತ್ ಹಾಗೂ ಧರ್ಮೇಂದ್ರ ತಲಾ 3 ವಿಕೆಟ್ ಪಡೆದರೆ ಮಂಕಡ್ 2 ವಿಕೆಟ್‌ಗೆ ತೃಪ್ತಿಪಟ್ಟರು.
ಇನ್ನೂ ಎರಡು ದಿನಗಳ ಆಟ ಬಾಕಿ ಉಳಿದಿದ್ದು ಪಂದ್ಯ ಸ್ಪಷ್ಟ ಲಿತಾಂಶ ಕಾಣುವ ನಿರೀಕ್ಷೆಯಿದೆ.







