ಇಂಡೋನೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್: ಪ್ರಶಸ್ತಿ ಸುತ್ತಿಗೆ ಸೈನಾ
ಜಕಾರ್ತ, ಜ.26: ಪ್ರಥಮ ಸೆಟ್‌ನ ಸೋಲಿನ ಆತಂಕದ ನಡುವೆಯೂ ಚೀನಾದ ಖ್ಯಾತ ಆಟಗಾರ್ತಿ 6ನೇ ಶ್ರೇಯಾಂಕದ ಹೆ ಬಿಂಗ್‌ಜಿಯಾವೊ ಅವರನ್ನು 18-21, 21-12, 21-18 ಗೇಮ್‌ಗಳ ಅಂತರದಿಂದ ಮಣಿಸಿದ ಭಾರತದ ಜನಪ್ರಿಯ ಬ್ಯಾಡ್ಮಿಂಟನ್ ತಾರೆ ಸೈನಾ ಶನಿವಾರ ಇಂಡೋನೇಶ್ಯ ಮಾಸ್ಟರ್ಸ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಈ ಋತುವಿನಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೆ ದಾಂಗುಡಿಯಿಟ್ಟಿದ್ದಾರೆ.
ಮೂರು ಸೆಟ್‌ಗಳ ತುರುಸಿನ ಹಣಾಹಣಿಯಲ್ಲಿ 8ನೇ ಶ್ರೇಯಾಂಕದ ಸೈನಾ ಕೊನೆಗೂ ಗೆಲುವಿನ ನಗೆ ಬೀರಿದರು. ಪಂದ್ಯದಲ್ಲಿ ಸೈನಾ ಉತ್ತಮ ಆರಂಭ ಪಡೆದರೂ ಪ್ರಥಮ ಗೇಮ್‌ನ್ನು 18-21ರಿಂದ ಕಳೆದುಕೊಂಡಾಗ ಸ್ವಲ್ಪ ಅಧೀರರಾದರು.
ಎರಡನೇ ಗೇಮ್‌ನಲ್ಲಿ ಭರ್ಜರಿ ವಾಪಸಾತಿ ಮಾಡಿದ ಅವರು, 21-12ರಿಂದ ಗೆದ್ದು ಸಂಭ್ರಮಿಸಿದರು. ನಿರ್ಣಾಯಕವಾದ ಮೂರನೇ ಗೇಮ್ ಇಬ್ಬರಿಗೂ ಉದ್ವೇಗ ಹೆಚ್ಚಿಸಿತು. ಅತ್ಯಂತ ಪ್ರಬಲ ಹೋರಾಟ ಕಂಡುಬಂದ ಗೇಮ್‌ನಲ್ಲಿ ಸೈನಾ ಅಂತಿಮವಾಗಿ ಒತ್ತಡವನ್ನು ಮೆಟ್ಟಿ ನಿಲ್ಲಲು ಯಶಸ್ವಿಯಾದರು. ರೋಚಕ ಗೇಮ್‌ನ್ನು 21-18ರಿಂದ ಗೆದ್ದು ಮೆರೆದರು. ಕಳೆದ ಬಾರಿ ಇದೇ ಟೂರ್ನಿಯಲ್ಲಿ ಸೈನಾ ರನ್ನರ್‌ಅಪ್ ಆಗಿದ್ದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಚೀನಾದ ಚೆನ್ ಯುಫೆಯ್ ಹಾಗೂ ಮೂರು ಬಾರಿಯ ವಿಶ್ವ ಚಾಂಪಿಯನ್ ಸ್ಪೇನ್‌ನ ಕರೊಲಿನಾ ಮರಿನ್ ಮುಖಾಮುಖಿಯಾಗಲಿದ್ದು, ಈ ಪಂದ್ಯದ ವಿಜೇತರನ್ನು ಸೈನಾ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಎದುರಿಸಲಿದ್ದಾರೆ. ಚಾಂಪಿಯನ್ ಆಗಿ ಹೊರಹೊಮ್ಮುವವರು 2,47,92,300 ರೂ.ವನ್ನು ತಮ್ಮ ಜೇಬಿಗಿಳಿಸಲಿದ್ದಾರೆ.







