ಅಯೋಧ್ಯೆ ವಿವಾದ: ಸುಪ್ರೀಂಕೋರ್ಟ್ಗೇ ಸವಾಲು ಹಾಕಿದ ಉ.ಪ್ರ. ಮುಖ್ಯಮಂತ್ರಿ ಆದಿತ್ಯನಾಥ್
ಲಕ್ನೋ, ಜ. 27: ಅಯೋಧ್ಯೆ ವಿವಾದದ ಬಗ್ಗೆ ತ್ವರಿತವಾಗಿ ತೀರ್ಪು ನೀಡಲು ಸಾಧ್ಯವಾಗದಿದ್ದರೆ, ಸುಪ್ರೀಂಕೋರ್ಟ್ ಈ ಪ್ರಕರಣವನ್ನು ನಮಗೆ ವರ್ಗಾಯಿಸಲಿ, 24 ಗಂಟೆಗಳ ಒಳಗಾಗಿ ಬಗೆಹರಿಸುತ್ತೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಸವಾಲು ಹಾಕಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬ ವಿಚಾರದಲ್ಲಿ ಜನಸಾಮಾನ್ಯರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ 2014ರಲ್ಲಿ ಗೆದ್ದ ಸ್ಥಾನಗಳಿಗಿಂತಲೂ ಹೆಚ್ಚು ಸ್ಥಾನಗಳನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಆದಿತ್ಯನಾಥ್ ಭವಿಷ್ಯ ನುಡಿದಿದ್ದಾರೆ.
ಅಯೋಧ್ಯೆ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸುತ್ತೀರಾ ಅಥವಾ ದಂಡಪ್ರಯೋಗದ ಮೂಲಕವೇ ಎಂದು ಇಂಡಿಯಾ ಟಿವಿ ಕೇಳಿದ ಪ್ರಶ್ನೆಗೆ, "ಮೊದಲು ಸುಪ್ರೀಂಕೋರ್ಟ್, ಈ ಪ್ರಕರಣವನ್ನು ನಮಗೆ ಹಸ್ತಾಂತರಿಸಲಿ" ಎಂದಷ್ಟೇ ಉತ್ತರಿಸಿದರು.
"ವ್ಯಾಜ್ಯವನ್ನು ಶೀಘ್ರ ಬಗೆಹರಿಸಬೇಕು ಎಂದು ಇಂದಿಗೂ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ. 2010ರ ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋರ್ಟ್ ವಿಭಾಗೀಯ ಪೀಠ ಭೂಮಿ ಹಂಚಿಕೆ ಬಗ್ಗೆ ತೀರ್ಪು ನೀಡದೇ, ಹಿಂದೂ ದೇವಸ್ಥಾನ ಅಥವಾ ಸ್ಮಾರಕವನ್ನು ಧ್ವಂಸ ಮಾಡಿ ಬಾಬರಿ ಮಸೀದಿ ನಿರ್ಮಿಸಲಾಗಿದೆ ಎಂದು ತೀರ್ಪು ನೀಡಿದೆ. ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ, ಹೈಕೋರ್ಟ್ ಆದೇಶದಂತೆ ಉತ್ಖನನ ಕೈಗೊಂಡು ಈ ಅಭಿಪ್ರಾಯವನ್ನು ನೀಡಿದೆ" ಎಂದು ಅವರು ಹೇಳಿದರು.