ರೋಮನ್ ಕ್ಯಾಥಲಿಕ್ ಕೆಥೆಡ್ರಲ್ ನಲ್ಲಿ ಬಾಂಬ್ ಸ್ಫೋಟ: 27 ಮಂದಿ ಮೃತ್ಯು

ಮನಿಲಾ (ಫಿಲಿಪ್ಪೀನ್ಸ್), ಜ. 27: ದಕ್ಷಿಣ ಫಿಲಿಪ್ಪೀನ್ಸ್ನ ದ್ವೀಪವೊಂದರ ರೋಮನ್ ಕೆಥೋಲಿಕ್ ಕ್ಯಾಥಡ್ರಲ್ ಒಂದರ ಹೊರಗೆ ರವಿವಾರ ಬೆಳಗ್ಗೆ ಸಂಭವಿಸಿದ ಅವಳಿ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದಾರೆ ಹಾಗೂ 77 ಮಂದಿ ಗಾಯಗೊಂಡಿದ್ದಾರೆ.
ಜೋಲೊ ಕ್ಯಾಥಡ್ರಲ್ನಲ್ಲಿ ರವಿವಾರದ ಪ್ರಾರ್ಥನೆ ನಡೆಯುತ್ತಿದ್ದಾಗ ಅದರ ಸಮೀಪ ಮೊದಲ ಬಾಂಬ್ ಸ್ಫೋಟಗೊಂಡಿತು ಹಾಗೂ ಭದ್ರತಾ ಪಡೆಗಳು ಈ ದಾಳಿಗೆ ಪ್ರತಿಕ್ರಿಯಿಸುತ್ತಿದ್ದಾಗ ಎರಡನೇ ಬಾಂಬ್ ಚರ್ಚ್ನ ಆವರಣದ ಹೊರಗೆ ಸ್ಫೋಟಿಸಿತು ಎಂದು ಭದ್ರತಾ ಅಧಿಕಾರಿಗಳು ತಿಳಿಸಿದರು.
‘ಅವರ್ ಲೇಡಿ ಆಫ್ ಮೌಂಟ್ ಕಾರ್ಮೆಲ್’ನ ಕ್ಯಾಥಡ್ರಲ್ನ ಹೊರಗಿನ ಜನನಿಬಿಡ ರಸ್ತೆಯಲ್ಲಿ ದೇಹಗಳು ಮತ್ತು ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಹರಡಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿನ ಚಿತ್ರಗಳು ತೋರಿಸಿವೆ.
ಈ ಕ್ಯಾಥಡ್ರಲ್ನ ಮೇಲೆ ಹಿಂದೆಯೂ ಬಾಂಬ್ ದಾಳಿಗಳಾಗಿವೆ.
ಗಾಯಗೊಂಡವರ ಪೈಕಿ ಕೆಲವರನ್ನು ಸಮೀಪದ ಝಾಮ್ ಬೋಂಗ ನಗರದ ಆಸ್ಪತ್ರೆಗಳಿಗೆ ಹೆಲಿಕಾಪ್ಟರ್ ಮೂಲಕ ಸಾಗಿಸಲಾಗಿದೆ.
ಪ್ರಸ್ತಾಪಿತ ಬಾಂಗ್ ಸಮೊರೊ ಸ್ವಾಯತ್ತ ವಲಯದಲ್ಲಿ ಜೋಲೊ ಇದೆ. ಕಳೆದ ವಾರ ಸ್ವಾಯತ್ತ ವಲಯದ ಪರವಾಗಿ ನಿವಾಸಿಗಳು ಭಾರೀ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ.
ಈ ದ್ವೀಪವು ಅಬು ಸೈಯಫ್ ಭಯೋತ್ಪಾದಕ ಗುಂಪಿನ ನೆಲೆಯಾಗಿದೆ.