ದಾಸ, ವಚನ ಸಾಹಿತ್ಯ ಸಮಾಜದ ಎರಡು ಕಣ್ಣು: ಸರ್ವಾಧ್ಯಕ್ಷೆ ಡಾ. ಲೀಲಾದೇವಿ ಅಭಿಮತ
ರಾಜ್ಯಮಟ್ಟದ ಮಹಿಳಾ ಸಮ್ಮೇಳನ

ಸಾಗರ, ಜ.27: ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಸಮಾಜದ ಎರಡು ಕಣ್ಣುಗಳಿದ್ದಂತೆ. ಎರಡರ ಕಾಲಘಟ್ಟ ಬೇರೆಯಾಗಿದ್ದರೂ, ಸಮಾಜ ಪರಿವರ್ತನೆಯ ಉದ್ದೇಶ ಒಂದೇ ಆಗಿದೆ ಎಂದು ಮಾಜಿ ಸಚಿವೆ ಹಾಗೂ ವಚನ ಮತ್ತು ದಾಸ ಸಾಹಿತ್ಯ ರಾಜ್ಯಮಟ್ಟದ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ಲೀಲಾದೇವಿ ಆರ್. ಪ್ರಸಾದ್ ಹೇಳಿದ್ದಾರೆ.
ಇಲ್ಲಿನ ಬ್ರಾಸಂ ಸಭಾಭವನದಲ್ಲಿ ಭಾನುವಾರ ಸ್ನೇಹ ಸಾಗರ ಸ್ವಸಹಾಯ ಮಹಿಳಾ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ರಾಜ್ಯಮಟ್ಟದ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷೆ ಸ್ಥಾನದಿಂದ ಮಾತನಾಡಿದ ಅವರು, ದಾಸ ಸಾಹಿತ್ಯ 11ನೇ ಶತಮಾನದಲ್ಲಿ, ವಚನ ಸಾಹಿತ್ಯ 12ನೇ ಶತಮಾನದಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸತ್ಸಮಾಜ ನಿರ್ಮಾಣಕ್ಕೆ ಪ್ರಮುಖ ಕೊಡುಗೆ ನೀಡಿವೆ ಎಂದರು. ವಚನ ಸಾಹಿತ್ಯವೂ ಸಮಾಜದಲ್ಲಿನ ಕಂದಾಚಾರ, ಮೂಡನಂಬಿಕೆ, ಮೇಲುಕೀಳುಗಳನ್ನು ತೊಡೆದು ಹಾಕುವಲ್ಲಿ ಪ್ರಮುಖಪಾತ್ರ ವಹಿಸಿದೆ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿದಂತೆ ಸಾವಿರಾರು ವಚನಕಾರರು ಬೇರೆಬೇರೆ ಅಂಕಿತ ನಾಮದೊಂದಿಗೆ ವಚನಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು. ದಾಸರಾಗಲೀ, ವಚನಕಾರರಾಗಲೀ ಯಾವುದೇ ವಿಶ್ವವಿದ್ಯಾನಿಲಯಕ್ಕೆ ಹೋಗಿ ಪದವಿ ಪಡೆದವರಲ್ಲ, ಡಾಕ್ಟರೇಟ್ ಮಾಡಿದವರಲ್ಲ. ಜನ ವಿಶ್ವವಿದ್ಯಾಲಯದಲ್ಲಿ ಓಡಾಡಿಕೊಂಡು ಜನರ ಭಾವನೆಗಳನ್ನು, ಅವರು ದಿನನಿತ್ಯ ಅನುಭವಿಸುತ್ತಿದ್ದ ಸಂಕಟಗಳನ್ನು ತಮ್ಮ ವಸ್ತುವಾಗಿ ಇರಿಸಿಕೊಂಡು ದಾಸಪದ ಹಾಗೂ ವಚನಗಳನ್ನು ರಚನೆ ಮಾಡಿದ್ದಾರೆ ಎಂದರು.
ಸುಮಾರು 900 ವರ್ಷಗಳ ಹಿಂದೆ ರಚಿತವಾಗಿರುವ ದಾಸ ಹಾಗೂ ವಚನ ಸಾಹಿತ್ಯ ಇಂದಿಗೂ ಜನಮಾನಸದಲ್ಲಿ ಗಟ್ಟಿಯಾಗಿ ನೆಲೆಯೂರಿರುವುದರ ಹಿಂದೆ ಎಷ್ಟೊಂದು ಸತ್ವ ಹಾಗೂ ಸತ್ಯ ಇದೆ ಎನ್ನುವುದನ್ನು ನಾವು ಅರ್ಥೈಸಿಕೊಳ್ಳಬೇಕು. ಇವುಗಳ ತುಲಾನಾತ್ಮಕ ಅಧ್ಯಯನ ನಡೆಸಿ, ಅವುಗಳನ್ನು ನಮ್ಮ ಬದುಕಿನಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವುದರ ಕುರಿತು ಚಿಂತನೆ ನಡೆಸಬೇಕು ಎಂದು ಹೇಳಿದರು. ನಂತರ 'ದಾಸ ಸಾಹಿತ್ಯದ ವಿಶೇಷತೆ ವಿಷಯ ಕುರಿತು ಮೈಸೂರಿನ ಡಾ. ನಾಗರತ್ನಾ ಟಿ.ಎಸ್., 'ವಚನಕಾರರಲ್ಲಿ ಸಾಮಾಜಿಕ ಪ್ರಜ್ಞೆ ವಿಷಯ ಕುರಿತು ಪ್ರಾಧ್ಯಾಪಕಿ ಸಂಪದಾ ಕೇರಿಮನಿ ಉಪನ್ಯಾಸ ನೀಡಿದರು. ಚೂಡಾಮಣಿ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಅನಿತಾಕುಮಾರಿ, ನಂದಾ ಗೊಜನೂರು, ಪುಷ್ಪಾ ಮಲ್ಲಿಕಾರ್ಜುನ್, ಸುನಂದಾ ಶಶಿಭೂಷಣ್, ಸವಿತಾ ಇನ್ನಿತರರು ಉಪಸ್ಥಿತರಿದ್ದರು. ನಂತರ ವಚನ ಮತ್ತು ದಾಸರಪದಗಳ ಗಾಯನ ಕಾರ್ಯಕ್ರಮ ನಡೆಯಿತು.






